ಅವ್ಯಯಗಳು

ಅವ್ಯಯ ಎಂದರೇನು?

ಅವ್ಯಯ ಎಂದರೆ ರೂಪಭೇದವಿಲ್ಲದಂತಹ ಪದಗಳು ಅಂದರೆ ಲಿಂಗ, ವಚನ, ವಿಭಕ್ತಿಗಳಿಂದ ಯಾವ ವ್ಯತ್ಯಾಸವನ್ನು ಹೊಂದದೆ ಒಂದೇ ರೂಪದಲ್ಲಿರುವ ಶಬ್ದಗಳನ್ನು ಅವ್ಯಯ ಎಂದು ಕರೆಯುತ್ತೆವೆ.

ಉದಾ: ಚೆನ್ನಾಗಿ, ಮೆಲ್ಲಗೆ, ಮತ್ತು, ಹಾಗೆ, ಆದರೆ, ಬಳಿಕ, ಹಹಹ, ಸುಮ್ಮನೆ ಸುಮ್ಮನೆ, ನೆಟ್ಟಗೆ, ಒಡನೆ, ವರೆಗೆ, ತುರುವಾಯ ಇತ್ಯಾದಿ.

ಈ ಕೆಳಗೆ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ.

  • ಅವಳು ಸುಮ್ಮನೆ ಇದ್ದಳು.
  • ಅವನು ಸುಮ್ಮನೆ ಇದ್ದನು.
  • ಅವರು ಸುಮ್ಮನೆ ಇದ್ದರು.
  • ಅದು ಸುಮ್ಮನೆ ಇತ್ತು.

ಈ ನಾಲ್ಕು ವಾಕ್ಯಗಳಲ್ಲಿ ಗಮನಿಸಿದಾಗ ʼಸುಮ್ಮನೆʼ ಎಂಬ ಪದವು ನಾಲ್ಕು ವಾಕ್ಯಗಳಲ್ಲಿ ಒಂದೆ ರೀತಿಯಾಗಿದೆ. ʼಸುಮ್ಮನೆʼ ಎಂಬ ಪದವು ಲಿಂಗ, (ಅವನು, ಅವಳು) ವಚನ, ವಿಭಕ್ತಿ ಪ್ರತ್ಯಯಗಳಿಂದ ಯಾವುದೇ ರೀತಿಯ ವ್ಯತ್ಯಾಸ ಹೊಂದದೆ ಏಕರೂಪದಲ್ಲಿದೆ. ಇದು ನಾಮಪದ ಹಾಗೂ ಕ್ರಿಯಾಪದದ ಹಾಗೆ ಲಿಂಗ, ವಚನ, ಪ್ರತ್ಯಯಗಳಿಂದ ಬದಲಾವಣೆಯನ್ನು ಹೊಂದುವುದಿಲ್ಲ ಈ ರೀತಿಯ ಪದವನ್ನು “ಅವ್ಯಯ” ಎನ್ನುವರು.

  • ನಾಮಪದ, ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕಿ ಪ್ರತ್ಯಯಗಳಿಂದ ರೂಪಭೇದವನ್ನು ಹೊಂದದೆ ಏಕರೂಪವಾಗಿರುವ ಪದಗಳನ್ನು ʼಅವ್ಯಯ ಎಂದು ಕರೆಯಲಾಗಿದೆ.

ʼಹೀಗೆ ಲಿಂಗ, ವಚನ, ವಿಭಕ್ತಿಗಳಿಂದ ಯಾವ ವ್ಯತ್ಯಾಸವನ್ನೂ ಹೊಂದದ ಅನೇಕ ಶಬ್ದಗಳನ್ನು ಭಾಷೆಯಲ್ಲಿ ಬಳಸುತ್ತೇವೆ. ಸುಮ್ಮನೆ, ನೆಟ್ಟಗೆ, ಮೆಲ್ಲಗೆ, ಸುತ್ತಲೂ, ತರುವಾಯ, ಇಲ್ಲ – ಇಂಥವೆಲ್ಲ ಇದೇ ವರ್ಗಕ್ಕೆ ಸೇರಿದವುಗಳು. ಇಂಥಹ ಅವ್ಯಯಗಳ ಬಗೆ ಬಗೆಯ ರೂಪದಲ್ಲಿ ಬಳಕೆಯಲ್ಲಿದ್ದು, ಅವುಗಳನ್ನು ಹೀಗೆ ಗುರುತಿಸಬಹುದು.

ಅವ್ಯಯದ 10 ವಿಧಗಳಿವೆ:

1) ಸಾಮಾನ್ಯಾವ್ಯಯ
2) ಅನುಕರಣಾವ್ಯಯ
3) ಭಾವಸೂಚಕಾವ್ಯಯ (ನಿಪಾತಾವ್ಯಯ)
4) ಕ್ರಿಯಾರ್ಥಕಾವ್ಯಯ
5) ಸಂಬಂಧಾರ್ಥಕಾವ್ಯಯ
6) ಕೃದಂತಾವ್ಯಯ
7) ತದ್ಧಿತಾಂತಾವ್ಯಯ
8) ಅವಧಾರಣಾರ್ಥಕಾವ್ಯಯ
9) ಸಂಬೋಧಕಾವ್ಯಯ
10) ಪ್ರಶ್ನಾರ್ಥಕಾವ್ಯಯ

1) ಸಾಮಾನ್ಯಾವ್ಯಯಗಳು:-

ಯಾವುದಾದರೊಂದು ಕ್ರಿಯೆ ನಡೆದ ಸ್ಥಳ, ಕಾಲ ಅಥವಾ ರೀತಿಯನ್ನು ಹೇಳು ವಂಥಹ ಪದಗಳೆ ಸಾಮಾನ್ಯಾವ್ಯಯಗಳು. ಇವು ಪ್ರಾಯಶಃ ಕ್ರಿಯೆಗೆ ವಿಶೇಷಣಗಳಾಗಿರುತ್ತವೆ.
ಉದಾಹರಣೆಗೆ:
1. ಸ್ಥಳಕ್ಕೆ: ಅಲ್ಲಿ, ಇಲ್ಲಿ ಎಲ್ಲಿ, ಮೇಲು, ಕೆಳಗು, ಸುತ್ತಲು.
2. ಕಾಲಕ್ಕೆ: ಇಂದು, ಅಂದು, ಎಂದು, ಆಗ, ಈಗ, ನಿನ್ನೆ, ಬಳಿಕ, ಬೇಗ, ತರುವಾಯ, ಒಡನೆ, ಕೂಡಲೆ, ಇನ್ನು.
3. ರೀತಿಗೆ: ಮೆಲ್ಲಗೆ, ಕಮ್ಮಗೆ, ನೆಟ್ಟಗೆ, ತಟ್ಟನೆ, ಬಿಮ್ಮಗೆ, ಚೆನ್ನಾಗಿ, ಬಿಮ್ಮನೆ,ಉಮ್ಮನೆ, ಸೊಗಸಾಗಿ, ಸುಮ್ಮನೆ, ಸುಮ್ಮಗೆ, ಕಮ್ಮನೆ, ಬೇಗನೆ, ಮೆಲ್ಲನೆ, ಸಲೆ, ಕರಂ, ಬೇರೆ, ಹಾಗೆ, ಹೀಗೆ, ಅಂತು, ಇಂತು, ಇತ್ಯಾದಿಗಳು.

2) ಅನುಕರಣಾವ್ಯಯಗಳು:-

ಅರ್ಥವಿಲ್ಲದ ಧ್ವನಿವಿಶೇಷಣಗಳನ್ನು ತಾನು ಕೇಳಿದಂತೆ ಪುನಃ ಅನುಕರಣ ಮಾಡಿ ಹೇಳುವ ಶಬ್ದಗಳೆಲ್ಲ ಅನುಕರಣಾವ್ಯಯಗಳೆನಿಸುವುವು.
ಉದಾಹರಣೆಗೆ: ನೀರು ದಬದಬ ಬಿದ್ದಿತು. ಪಟಪಟ ಮಳೆ ಸುರಿಯಿತು.
ಇಲ್ಲಿ ‘ದಬದಬ ಪಟಪಟ’ ಇವು ಅನುಕರಣಾವ್ಯಯಗಳು. ಇದರಂತೆ ಚಟಚಟ, ಕರಕರ, ಚುರುಚುರು, ಸಿಮಿಸಿಮಿ, ಧಗಧಗ, ತಟತಟ, ರೊಯ್ಯನೆ, ಸುಯ್ಯನೆ, ಧಿಗಿಲನೆ, ಭೋರನೆ, ಘುಳುಘುಳು, ಗುಡುಗುಡು, ದಡದಡ-ಇತ್ಯಾದಿ.

3) ಭಾವಸೂಚಕಾವ್ಯಯಗಳು (ನಿಪಾತಾವ್ಯಯಗಳು):-

ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ-ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಕೆಲವು ಅರ್ಥವಿಲ್ಲದ ಶಬ್ದಗಳನ್ನು ಬಳಸುತ್ತೇವೆ. ಇವನ್ನು ಭಾವಸೂಚಕಾವ್ಯಯಗಳೆನ್ನುವರು.
ಇವಕ್ಕೆ ನಿಪಾತಾವ್ಯಯಗಳೆಂದೂ ಹೆಸರು.
ಉದಾಹರಣೆಗೆ:
ಎಲಾ! ಅಯ್ಯೋ! ಅಕ್ಕಟಾ! ಅಕಟಕಟಾ! ಆಹಾ! ಭಲೇ! ಭಲಾ! ಭಳಿರೇ! ಛೇ! ಥೂ! ಅಬ್ಬಾ! ಅಹಹಾ! ಆಹಾ! ಓಹೋ! ಹೋ! ಹೋಹೋ! ಅಃ! ಎಲೆಲಾ! ಓ! ಏ! ಆಃ! ಹಹಹ! ಇತ್ಯಾದಿ.

4) ಕ್ರಿಯಾರ್ಥಕಾವ್ಯಯಗಳು:-

ಕ್ರಿಯಾಪದದ ಸ್ಥಾನದಲ್ಲಿ ನಿಂತು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಕೆಲವು ಅವ್ಯಯಗಳು ಕ್ರಿಯಾರ್ಥಕಾವ್ಯಯಗಳೆನಿಸುವವು.
ಉದಾಹರಣೆಗೆ: ಉಂಟು, ಬೇಕು, ಬೇಡ, ಅಲ್ಲ, ಅಹುದು, ಹೌದು, ಸಾಕು, ಇಲ್ಲ-ಇತ್ಯಾದಿಗಳು.

5) ಸಂಬಂಧಾರ್ಥಕಾವ್ಯಯಗಳು:-

ಎರಡು ಪದಗಳನ್ನಾಗಲಿ, ಅಥವಾ ಹಲವು ಪದ ಸಮುಚ್ಚಯಗಳನ್ನಾಗಲಿ, ವಾಕ್ಯಗಳನ್ನಾಗಲಿ, ಜೋಡಿಸುವಂಥ ಮತ್ತು ಸಂಬಂಧಗೊಳಿಸುವಂಥ ಶಬ್ದಗಳು ಸಂಬಂಧಾರ್ಥಕಾವ್ಯಯಗಳು.
ಉದಾಹರಣೆಗೆ: ಊ, ಉಂ, ಮತ್ತು, ಅಥವಾ, ಆದ್ದರಿಂದ, ಆದುದರಿಂದ, ಅಲ್ಲದೆ.

(i) ಪದಗಳನ್ನು ಜೋಡಿಸುವಿಕೆ:-
(೧) ರಾಮನೂ (ಊ), ಭೀಮನೂ (ಊ), ಸೀತೆಯೂ (ಊ) ಬಂದರು.
(೨) ರಾಮನುಂ (ಉಂ), ಭೀಮನುಂ (ಉಂ), ಸೀತೆಯುಂ (ಉಂ) ಬಂದರ್.
ನೀನು ಮತ್ತು ನಾನು ಇಬ್ಬರೂ ಹೋಗೋಣ.
ಮೇಲಿನ ವಾಕ್ಯಗಳಲ್ಲಿ ರಾಮ ಭೀಮ ಸೀತೆಯರನ್ನು ಮಧ್ಯದಲ್ಲಿರುವ ಊ ಎಂಬ ಸಂಬಂಧಾರ್ಥಕಾವ್ಯಯವೂ ಮತ್ತು ಉಂ ಎಂಬ ಸಂಬಂಧಾರ್ಥಕಾವ್ಯಯವೂ ಜೋಡಿಸಿವೆ (ಸಂಬಂಧಗೊಳಿಸಿವೆ).

(ii) ಎರಡು ಪದಗಳನ್ನು ಜೋಡಿಸುವಿಕೆ:-
ಅವನು ಬರುವುದೂ (ಊ) ಬೇಡ; ಆ ಕೆಲಸವಾಗುವುದೂ (ಊ) ಬೇಡ.
ಮೇಲಿನ ಉದಾಹರಣೆಯಲ್ಲಿ ಬರುವುದು+ಊ, ಆಗುವುದು+ಊ ಎಂಬಲ್ಲಿ ಊ ಬಂದಿರುವುದರಿಂದ ಎರಡೆರಡು ಪದಗಳನ್ನು ಜೋಡಿಸುವ ಈ ಊ ಕಾರವು ಪದಸಮುಚ್ಚಯವನ್ನು ಜೋಡಿಸಿದಂತಾಯಿತು.

(iii) ಅವನು ಮತ್ತು ನೀನು ಇಬ್ಬರೂ ಹೋಗಿರಿ:
ಇಲ್ಲಿ ‘ಮತ್ತು’ ಎಂಬುದು ಅವನು, ನೀನು ಎಂಬೆರಡು ಪದಗಳನ್ನು ಸಂಬಂಧಗೊಳಿಸಿವೆ.

(iv) ತಂದೆತಾಯಿಗಳ ಸೇವೆ ಮಾಡಬೇಕು ಮತ್ತು ಅವರ ಆಜ್ಞೆಯನ್ನು ಪಾಲಿಸಬೇಕು.
ಇಲ್ಲಿ ‘ಮತ್ತು’ ಎಂಬುದು ಎರಡು ವಾಕ್ಯಗಳನ್ನು ಸಂಬಂಧಗೊಳಿಸಿದೆ. ಇವುಗಳ ಹಾಗೆಯೆ ಉಳಿದ ಸಂಬಂಧಾರ್ಥಕಾವ್ಯಯಗಳ ಬಗೆಗೆ ಕೆಳಗಿನ ಉದಾಹರಣೆಗಳನ್ನು ನೋಡಿರಿ.
ಆದ್ದರಿಂದ-
ಅವನು ಬರಲಿಲ್ಲ ಆದ್ದರಿಂದ ನಾನು ಬರಲಿಲ್ಲ.
ಆದರೆ-
ಮಳೆಬಂದಿತು ಆದರೆ ಕೆರೆ ತುಂಬಲಿಲ್ಲ.
ಆದುದರಿಂದ-
ಅವನು ಬರಲಿಲ್ಲ ಆದುದರಿಂದ ಕೊಡಲಿಲ್ಲ.
ಇನ್ನೂ-
ಹತ್ತು ಮೂಟೆ ಬಂತು, ಇನ್ನೂ ಐದು ಮೂಟೆ ಬರಬೇಕು.
ಹಾಗಾದರೆ-ನೀನು ಬರಬೇಕೆ? ಹಾಗಾದರೆ ಬೇಗ ಬಾ.
ಅಥವಾ-ಒಂದು ಮೂಟೆ ಅಕ್ಕಿ ಕೊಡು, ಅಥವಾ ನೂರಐವತ್ತು ರೂಪಾಯಿಕೊಡು.
ಆಗ-ನೀನು ಇಲ್ಲಿಗೆ ಬಾ, ಆಗ ಎಲ್ಲವೂ ಸರಿ ಹೋಗುತ್ತದೆ.

ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದ ಅವ್ಯಯಗಳು ಎರಡು ವಾಕ್ಯಗಳನ್ನು ಸಂಬಂಧಗೊಳಿಸಿದ ಸಂಬಂಧಾರ್ಥಕಾವ್ಯಯಗಳೆಂದು ತಿಳಿಯಬೇಕು.

6) ಕೃದಂತಾವ್ಯಯ:- 7) ತದ್ಧಿತಾಂತವ್ಯಯ:-

ಈ ಎರಡೂ ಜಾತಿಯ ಅವ್ಯಯ ಪ್ರಭೇದಗಳನ್ನು ಕೃದಂತ ತದ್ಧಿತಾಂತ ಪ್ರಕರಣಗಳಲ್ಲಿ ವಿಶದವಾಗಿ ತಿಳಿದಿದ್ದೀರಿ. ಆ ಪ್ರಕರಣವನ್ನು ಪುನಃ ನೋಡಿ ಇವುಗಳ ವಿಷಯವಾಗಿ ಜ್ಞಾಪಿಸಿಕೊಳ್ಳಿರಿ.

8) ಅವಧಾರಣಾರ್ಥಕಾವ್ಯಯ:-

ಒಂದು ನಿಶ್ಚಯಾರ್ಥದಲ್ಲಿ ಬರುವ ಅವ್ಯಯವೇ ಅವಧಾರಣಾರ್ಥಕಾವ್ಯಯ. ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವುದೇ ಅವಧಾರಣೆಯೆನಿಸುವುದು.
ಉದಾಹರಣೆಗೆ:
(i) ಅದೇ ನನ್ನ ಪುಸ್ತಕ.
ಈ ವಾಕ್ಯದಲ್ಲಿ (ಅದು+ಏ) ದಕಾರದ ಮುಂದಿರುವ ‘ಏ’ ಕಾರವೇ ಅವಧಾರಣಾರ್ಥಕಾವ್ಯಯವೆನಿಸುವುದು. ಇದರಂತೆ-
(ii) ನಾನೇ ಅದನ್ನು ಬರೆದೆನು.
ಇಲ್ಲಿ (ನಾನು+ಏ) ನಾನೇ ಎಂದು ಬರವಣಿಗೆಯನ್ನು ಮಾಡಿದ ವಿಷಯದಲ್ಲಿ ನಿಶ್ಚಯಿಸಿ ಹೇಳುವುದರಿಂದ ‘ಏ’ ಎಂಬುದು ಅವಧಾರಣಾರ್ಥಕಾವ್ಯಯವೆನಿಸಿತು.

9) ಸಂಬೋಧಕಾವ್ಯಯ:

ಕರೆಯುವಾಗ / ಸಂಬೋಧಿಸುವಾಗ ಉಪಯೋಗಿಸುವ ಶಬ್ದಗಳನ್ನು ಸಂಬೋಧಕಾವ್ಯಯಗಳು ಎಂದು ಕರೆಯುತ್ತಾರೆ. ಎಲಾ, ಎಲೋ, ಎಲೇ, ಎಲೌ, ಓ ಇತ್ಯಾದಿ

10) ಪ್ರಶ್ನಾರ್ಥಕಾವ್ಯಯ:

ಪ್ರಶ್ನೆಮಾಡುವಾಗ ಉಪಯೋಗಿಸುವ ಅವ್ಯಯಗಳನ್ನು ಪ್ರಶ್ನಾರ್ಥಕಾವ್ಯಯಗಳು ಎನ್ನುತ್ತಾರೆ. ಎ, ಏ, ಓ, ಆ, ಏನು ಎಂಬ ಪ್ರತ್ಯಯಗಳು ಪ್ರಶ್ನಾರ್ಥವನ್ನು ಸೂಚಿಸುತ್ತವೆ.
ಅವರು ಹೋದರೇ?
ನೀನು ಬಂದೆಯಾ?
ಅವರು ನಿನ್ನ ಮಾವನವರೇ?
ಅವಳು ನಿನ್ನ ಸಂಗಾತಿಯೇ?