ತದ್ಧಿತಾಂತಗಳು

ಈ ಅಧ್ಯಾಯದಲ್ಲಿ ತದ್ಧಿತಾಂತ, ತದ್ಧಿತಾಂತದ ಪ್ರಕಾರಗಳು ಹಾಗೂ ತದ್ಧಿತಾಂತ & ಕೃದಂತದ ನಡುವಿನ ವ್ಯತ್ಯಾಸದೊಂದಿಗೆ ಈ ಕೆಳಗಿನ ಪರಿವಿಡಿಯಂತೆ ಉದಾಹರಣೆಗಳ ಜೊತೆಗೆ ಕಲಿಯೋಣ ಬನ್ನಿ.

ತದ್ಧಿತಾಂತ ಎಂದರೇನು?

ತದ್ಧಿತಾಂತಗಳು (ತದ್ಧಿತ + ಅಂತ)
ನಾಮಪದಗಳ ಮೇಲೆ ಬೇರೆ ಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ವಳ, ಇಕ, ಆಳಿ-ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಶಬ್ದವನ್ನ್ನು ‘ತದ್ಧಿತಾಂತ’ ಎನ್ನುವರು.

ಉದಾ: ಕನ್ನಡವನ್ನು ತಿಳಿದವನು ಬಂದನು.

ಈ ವಾಕ್ಯದಲ್ಲಿ ಇರುವ ಕನ್ನಡವನ್ನು ಎಂಬ ಪದದ ಮುಂದೆ ಬಲ್ಲವನು ಎಂಬ ಅರ್ಥದಲ್ಲಿ ಇಗ ಎಂಬ ಪ್ರತ್ಯಯವನ್ನು ಸೇರಿಸಿ ಕನ್ನಡಿಗ ಎಂಬ ಪದವನ್ನು ಮಾಡಬಹುದು. ಅಂದರೆ ಕನ್ನಡವನ್ನು + (ತಿಳಿದವನು) + ಇಗ = ಕನ್ನಡಿಗ ಎಂಬ ರೀತಿಯಲ್ಲಿ ಪದರಚನೆಯಾಗುತ್ತದೆ. ಒಂದು ಪ್ರಕೃತಿ ಪದಕ್ಕೆ ಎರಡು ಪ್ರತ್ಯಯವನ್ನು ಸೇರಿಸುವ ಕ್ರಮವಿಲ್ಲ.

ಹಾಗಾಗಿ ಕನ್ನಡ ಎಂಬ ಪ್ರಕೃತಿ ಪದದ ಜೊತೆಗೆ ಇದ್ದ ಅನ್ನು ಎಂಬ ಪ್ರತ್ಯಯವನ್ನು ತೆಗೆದು ಇಗ ಎಂಬ ತದ್ಧಿತ ಪ್ರತ್ಯಯವನ್ನು ಮಾತ್ರ ಉಳಿಸಿಕೊಂಡು ಕನ್ನಡಿಗ ಎಂಬ ತದ್ಧಿತಾಂತ ಪದರಚನೆ ಮಾಡಲಾಗುವುದು.

ಈ ತದ್ಧಿತ ಪ್ರತ್ಯಯಗಳು ಸೇರುವಾಗ ಮಧ್ಯದ ವಿಭಕ್ತಿ ಪ್ರತ್ಯಯವು ಲೋಪವಾಗುವುದು.

ತದ್ಧಿತಾಂತ & ಕೃದಂತದ ನಡುವಿನ ವ್ಯತ್ಯಾಸ

  • ಕೃದಂತವು ಕ್ರಿಯಾಪಕೃತಿಯಿಂದ ರಚನೆಯಾಗುತ್ತದೆ ಆದರೆ ಅದು ಎಂದಿಗೂ ಪೂರ್ಣ ಕ್ರಿಯಾಪದವಾಗುವುದಿಲ್ಲ.
  • ತದ್ಧಿತಾಂತವು ನಾಮಪಕೃತಿಯಿಂದ ರಚನೆಯಾಗುತ್ತದೆ
  • ವ್ಯಕ್ತಿಯಲ್ಲಿ ಶಾಶ್ವತವಾಗಿ ಇರುವಂತಹ ಭಾವವೇ ತದ್ಧಿತಾಂತ ಭಾವನಾಮ.
  •  ವ್ಯಕ್ತಿಯಲ್ಲಿ ಹಾಗೆ ಬಂದು ಹೀಗೆ ಹೋಗುವ ಭಾವವೇ ಕೃದಂತ ಭಾವನಾಮ.

ಪ್ರಾತಿಪದಿಕದ (ನಾಮಪ್ರಕೃತಿ) ಮೇಲೆ ವಿಭಕ್ತಿ ಪ್ರತ್ಯಯವು ಸೇರಿ ನಾಮಪದವಾಗುತ್ತದೆ. ಈ ನಾಮಪದದ ಮೇಲೆ ಬೇರೆ ಬೇರೆ ಅರ್ಥದಲ್ಲಿ ಮತ್ತೆ ಕೆಲವು ಪ್ರತ್ಯಯಗಳು ಬರುತ್ತವೆ. ಇವುಗಳನ್ನು ತದ್ಧಿತವೆಂದು ಹೆಸರು. ಈ ಪ್ರತ್ಯಯಗಳು ಅಂತ್ಯದಲ್ಲಿ ಬರುವುದರಿಂದ ಇವುಗಳಿಗೆ ತದ್ಧಿತಾಂತ ಪ್ರತ್ಯಯಗಳೆಂದು ಕರೆಯುತ್ತಾರೆ.

ತದ್ಧಿತಾಂತ ಪ್ರತ್ಯಗಳಲ್ಲಿ ಸ್ತ್ರೀಲಿಂಗ ಮತ್ತು ಪುಲ್ಲಿಂಗಗಳಿಗೆ ಪ್ರತ್ಯೇಕವಾದ ತದ್ಧಿತ ಪ್ರತ್ಯಯಗಳನ್ನು ಬಳಸಲಾಗುವುದು.
ಉದಾ:
ಹಣವಂತ – ಹಣವಂತೆ
ಹೂವಾಡಿಗ – ಹೂವಾಡಗಿತ್ತಿ
ಅರಸ – ಅರಸಿ
ಯಜಮಾನ – ಯಜಮಾನಿ
ಒಕ್ಕಲಿಗ – ಒಕ್ಕಲತಿ

ತದ್ಧಿತ ಪ್ರತ್ಯಯಗಳಲ್ಲಿ 3 ವಿಧಗಳು

(1) ತದ್ಧಿತಾಂತ ನಾಮ
(2) ತದ್ಧಿತಾಂತ ಭಾವನಾಮ
(3) ತದ್ಧಿತಾಂತಾವ್ಯಯ

(1) ತದ್ಧಿತಾಂತ ನಾಮ:

ನಾಮ ಪ್ರಕೃತಿಗಳಿಗೆ ಬೇರೆಬೇರೆ ಅರ್ಥದಲ್ಲಿ ~ಇಗ, ~ಇಕ, ~ಆಡಿಗ, ~ಕಾರ, ~ಕೋರ, ~ಗಾರ, ~ವಂತ, ~ವಾಳ, ~ವಳ, ~ಆಳಿ, ~ಗುಳಿ, ~ಆರ, ~ಅನೆಯ ಮೊದಲಾದ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಶಬ್ದಗಳನ್ನು ‘ತದ್ಧಿತಾಂತನಾಮ’ ಎನ್ನುವರು.

ತದ್ಧಿತಾಂತ ನಾಮ
ಅರ್ಥನಾಮಪ್ರಕೃತಿತದ್ಧಿತ ಪ್ರತ್ಯಯತದ್ಧಿತಾಂತ ನಾಮ
ಕನ್ನಡವನ್ನು ತಿಳಿದವನುಕನ್ನಡಇಗಕನ್ನಡಿಗ
ಚೆನ್ನಾಗಿ ಕಾಣುವವನುಚೆನ್ನಇಗಚೆನ್ನಿಗ
ಕೇಡನ್ನು ಮಾಡುವವನುಕೇಡುಇಗಕೇಡಿಗ
ಗಾಣವನ್ನು ಆಡಿಸುವವನುಗಾಣಇಗಗಾಣಿಗ
ಲೇಕ್ಕವನ್ನು ಮಾಡುವವನುಲೆಕ್ಕಇಗಲೆಕ್ಕಿಗ
ಗಂಧವನ್ನು ಮಾರುವವನುಗಂಧಇಗಗಂಧಿಗ
ನಾವೆಯನ್ನು ನಡೆಸುವವನು ನಾವಿಕನಾವೆಇಕನಾವಿಕ
ಪ್ರಮಾಣವನ್ನು ಉಳ್ಳವನುಪ್ರಮಾಣಇಕಪ್ರಾಮಾಣಿಕ
ಹೂವನ್ನು ಮಾರುವವನುಹೂವುಆಡಿಗಹೂವಾಡಿಗ
ಹಾವನ್ನು ಆಡಿಸುವವನುಹಾವುಆಡಿಗಹಾವಾಡಿಗ
ಕೈದನ್ನು ಹಿಡಿದಿರುವವನುಕೈದುಕಾರಕೈದುಕಾರ
ಕೋಲನ್ನು ಹಿಡಿಯುವವನುಕೋಲುಕಾರಕೋಲುಕಾರ
ಓಲೆಯನ್ನು ತರುವವನುಓಲೆಕಾರಓಲೆಕಾರ
ಬಳೆಯನ್ನು ಮಾರುವವನುಬಳೆಗಾರಬಳೆಗಾರ
ಬೇಟೆಯನ್ನು ಆಡುವವನುಬೇಟೆಗಾರಬೇಟೆಗಾರ
ಛಲವನ್ನು ಉಳ್ಳವನುಛಲಗಾರಛಲಗಾರ
ಮೋಸವನ್ನು ಮಾಡುವವನುಮೋಸಗಾರಮೋಸಗಾರ
ಕೊಲೆಯನ್ನು ಮಾಡುವವನುಕೊಲೆಗಾರಕೊಲೆಗಾರ
ಸಾಲವನ್ನು ಪಡೆದವನುಸಾಲಗಾರಸಾಲಗಾರ
ಪಾಲನ್ನು ಮಾಡುವವನುಪಾಲುಗಾರಪಾಲುಗಾರ
ಮಾತನ್ನು ಆಡುವವನುಮಾತುಗಾರಮಾತುಗಾರ
ಬುದ್ಧಿಯನ್ನು ಉಳ್ಳವನುಬುದ್ಧಿವಂತಬುದ್ಧಿವಂತ
ಹಣವನ್ನು ಉಳ್ಳವನುಹಣವಂತಹಣವಂತ
ಧನವನ್ನು ಉಳ್ಳವನುಧನವಂತಧನವಂತ
ಸಿರಿಯನ್ನು ಉಳ್ಳವನುಸಿರಿವಂತಸಿರಿವಂತ
ಗುಣವನ್ನು ಉಳ್ಳವನುಗುಣವಂತಗುಣವಂತ
ರೂಪವನ್ನು ಉಳ್ಳವನುರೂಪವಂತರೂಪವಂತ
ಕರಿಯ ಬಣ್ಣವನ್ನು ಉಳ್ಳುವನುಕರಿಇಕಕರಿಕ
ಬಿಳಿಯ ಬಣ್ಣವನ್ನು ಉಳ್ಳುವನುಬಿಳಿಇಕಬಿಳಿಕ
ಮಡಿಯನ್ನು ಮಾಡುವವನುಮಡಿವಳಮಡಿವಳ
ಸಜ್ಜೆಯನ್ನು ಸಿದ್ಧಪಡಿಸುವವನುಸಜ್ಜೆವಳಸಜ್ಜೆವಳ
ಓದನ್ನು ಹೆಚ್ಚು ಆಚರಿಸುವವನುಓದುಆಳಿಓದಾಳಿ
ಜೂಜನ್ನು ಆಡುವವನುಜೂಜುಆಳಿಜೂದಾಳಿ
ಅತಿ ಹೆಚ್ಚು ಮಾತನ್ನು ಆಡುವವನುವಾಚಆಳಿವಾಚಾಳಿ
ಅತಿ ಹೆಚ್ಚು ಮಾತನ್ನು ಆಡುವವನುಮಾತುಆಳಿಮಾತಾಳಿ
ಲಂಚವನ್ನು ತೆಗೆದುಕೊಳ್ಳುವವನುಲಂಚಗುಳಿಲಂಚಗುಳಿ
ಕಬ್ಬಿಣದ ಕೆಲಸಮಾಡುವವನುಕಮ್ಮಆರಕಮ್ಮಾರ
ಕುಂಭವನ್ನು ಮಾಡುವವನುಕುಂಭಆರಕುಂಬಾರ
ಒಂದು ಸಂಖ್ಯೆಯುಳ್ಳದ್ದುಒಂದುಅನೆಯಒಂದನೆಯ
ಎರಡು ಸಂಖ್ಯೆಯುಳ್ಳದ್ದುಎರಡುಅನೆಯಎರಡನೆಯ
ಚಾಡಿಯನ್ನು ಹೇಳುವವನುಚಾಡಿಕೋರಚಾಡಿಕೋರ
ಲಂಚವನ್ನು ಪಡೆಯುವವನುಲಂಚಕೋರಲಂಚಕೋರ

ಪ್ರಾತಿಪದಿಕದ (ನಾಮಪ್ರಕೃತಿ) ಮೇಲೆ ವಿಭಕ್ತಿ ಪ್ರತ್ಯಯವು ಸೇರಿ ನಾಮಪದವಾಗುತ್ತದೆ. ಈ ನಾಮಪದದ ಮೇಲೆ ಬೇರೆ ಬೇರೆ ಅರ್ಥದಲ್ಲಿ ಮತ್ತೆ ಕೆಲವು ಪ್ರತ್ಯಯಗಳು ಬರುತ್ತವೆ. ಇವುಗಳನ್ನು ತದ್ಧಿತವೆಂದು ಹೆಸರು. ಈ ಪ್ರತ್ಯಯಗಳು ಅಂತ್ಯದಲ್ಲಿ ಬರುವುದರಿಂದ ಇವುಗಳಿಗೆ ತದ್ಧಿತಾಂತ ಪ್ರತ್ಯಯಗಳೆಂದು ಕರೆಯುತ್ತಾರೆ.

ಸ್ತ್ರೀಲಿಂಗದಲ್ಲಿ ಬರುವ ತದ್ಧಿತ ಪ್ರತ್ಯಯಗಳು
ಸ್ತ್ರೀಲಿಂಗದಲ್ಲಿ ಇತಿ, ಇತ್ತಿ, ಗಿತ್ತಿ, ತಿ, ಇ, ಎ ಇತ್ಯಾದಿ ತದ್ಧಿತ ಪ್ರತ್ಯಯಗಳು ನಾಮಪದದ ಜೊತೆಗೆ ಸೇರಿದಾಗ ತದ್ಧಿತಾಂತಗಳು.

ಪುಲ್ಲಿಂಗ ರೂಪಸ್ತ್ರೀವಾಚಕ ತದ್ಧಿತ ಪ್ರತ್ಯಯಸ್ತ್ರೀಲಿಂಗ ರೂಪ
ಬೀಗಇತಿಬೀಗತಿ
ಬ್ರಾಹ್ಮಣ ಬ್ರಾಹ್ಮಣಿತಿ
ಒಕ್ಕಲಿಗಇತ್ತಿಒಕ್ಕಲಗಿತ್ತಿ
ಹೂವಾಡಿಗ ಹೂವಾಡಗಿತ್ತಿ
ಅಗಸಗಿತ್ತಿಅಗಸಗಿತ್ತಿ
ಅರಸಅರಸಿ
ಅಣುಗ (ಮಗ, ಪ್ರೀತಿ ಪಾತ್ರ) ಅಣುಗಿ (ಮಗಳು)
ಗೊಲ್ಲತಿಗೊಲ್ಲತಿ
ಒಡೆಯ ಒಡತಿ
ಕನ್ನಡಿಗ ಕನ್ನಡತಿ
ಜಾಣಜಾಣೆ
ಕಳ್ಳ ಕಳ್ಳೆ
ಹಣವಂತ ಹಣವಂತೆ
ಮೋಸಗಾರಆರ್ತಿಮೋಸಗಾರ್ತಿ
ಮಾತುಗಾರ ಮಾತುಗಾರ್ತಿ
ಬೇಟೆಗಾರ ಬೇಟೆಗಾರ್ತಿ

(2) ತದ್ಧಿತಾಂತ ಭಾವನಾಮಗಳು:

ಷಷ್ಠೀವಿಭಕ್ತಿಯೊಂದಿಗೆ ಕೊನೆಯಾಗುವ ನಾಮ ಪ್ರಕೃತಿಗಳ ಮುಂದೆ ಭಾವಾರ್ಥದಲ್ಲಿ ~ತನ, ~ಇಕೆ, ~ಉ, ~ಪು, ~ಮೆ, ಮೊದಲಾದ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಪದಗಳನ್ನು ‘ತದ್ಧಿತಾಂತ ಭಾವನಾಮ’ ಎನ್ನುವರು.

ಪ್ರತ್ಯಯನಾಮಪದಭಾವಾರ್ಥದಲ್ಲಿ ಪ್ರತ್ಯಯತದ್ಧಿತಾಂತ ಭಾವನಾಮ
ತನದೊಡ್ಡವನ (ಭಾವ)–    ತನದೊಡ್ಡತನ ಇದೆ ರೀತಿ ಜಾಣತನ, ಚಿಕ್ಕತನ, ಹಿರಿತನ, ಕಿರಿತನ, ಕೆಟ್ಟತನ
ಇಕೆಬ್ರಾಹ್ಮಣನ (ಭಾವ)–    ಇಕೆಬ್ರಾಹ್ಮಣಿಕೆ ಇದೆ ರೀತಿ ಚೆಲುವಿಕೆ
ಕಿವುಡನ (ಭಾವ)–    ಉಕಿವುಡು ಇದೆ ರೀತಿ ಕುಳ್ಳು, ಕುರುಡು, ಕುಂಟು, ತೊದಲು,
ಪುಬಿಳಿದರ (ಭಾವ)–    ಪುಬಿಳುಪು, ಕಪ್ಪು, ಇಂಪು, ತಂಪು, ಕಂಪು, ಕೆಂಪು, ನುಣುಪು, ಹೊಳಪು
ಮೆಜಾಣನ (ಭಾವ)–    ಮೆಜಾಣ್ಮೆ ಇದೆ ರೀತಿ ಹಿರಿಮೆ, ಕಿರಿಮೆ
 ಪಿರಿದರ (ಭಾವ)ಪೆರ್ಮೆ (ಹಿರಿಮೆ, ಗರ್ವ)

(3) ತದ್ಧಿತಾಂತ ಅವ್ಯಯಗಳು:

ನಾಮ ಪ್ರಕೃತಿಗಳಿಗೆ ~ಅಂತೆ, ~ವೊಲ್, ~ವೊಲು, ~ವೋಲ್, ~ವೋಲು, ~ತನಕ, ~ವರೆಗೆ, ~ಮಟ್ಟಿಗೆ, ~ಓಸ್ಕರ, ~ಇಂತ, ~ಆಗಿ, ~ಓಸುಗ, ಮೊದಲಾದ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಶಬ್ದಗಳನ್ನು ‘ತದ್ಧಿತಾಂತ ಅವ್ಯಯಗಳು’ ಎನ್ನುವರು.

ಅಂತೆಶಿವನಂತೆ, ಸೂರ್ಯನಂತೆ, ಅವನಂತೆ, ಇವನಂತೆ, ಸೀತೆಯಂತೆ
ವೊಲ್ಶಿವನವೊಲ್‌, ಸೂರ್ಯನವೊಲ್‌
ತನಕಮನೆತನಕ, ಅಲ್ಲಿತನಕ, ಕಡೆತನಕ, ದಾರಿತನಕ,
ವರೆಗೆಮನೆವರೆಗೆ, ಕೊನೆವರೆಗೆ, ಅಲ್ಲಿವರೆಗೆ, ಶಾಲೆವರೆಗೆ
ಮಟ್ಟಿಗೆನನ್ನಮಟ್ಟಿಗೆ, ಅವರಮಟ್ಟಿಗೆ, ಇವರಮಟ್ಟಿಗೆ
ಓಸ್ಕರನನಗೋಸ್ಕರ, ನೀನಗೋಸ್ಕರ, ನಾಯಿಗೋಸ್ಕರ
ಇಂತಇವರಿಗಿಂತ, ಅವರಿಗಿಂತ, ಅವಳಿಗಿಂತ, ಅದಕ್ಕಿಂತ
ಆಗಿನಿನಗಾಗಿ, ನನಗಾಗಿ, ಅವರಿಗಾಗಿ, ಎಲ್ಲರಿಗಾಗಿ
ಸಲುವಾಗಿನಿನ್ನ ಸಲುವಾಗಿ, ಮನೆಯ ಸಲುವಾಗಿ