ನಾಮಪದಗಳು

ನಾಮಪದಗಳು: ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು  ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ.

ನಾಮಪದದ ವಿಧಗಳು

  1. ವಸ್ತುವಾಚಕ ಅಥವಾ ನಾಮವಾಚಕ,
  2. ಗುಣವಾಚಕ,
  3. ಸಂಖ್ಯಾವಾಚಕ,
  4. ಸಂಖ್ಯೇಯವಾಚಕ,
  5. ಭಾವನಾಮ,
  6. ಪರಿಮಾಣ ವಾಚಕ,
  7. ಪ್ರಕಾರವಾಚಕ
  8. ದಿಗ್ವಾಚಕ,
  9. ಸರ್ವನಾಮ ಎಂಬುದಾಗಿ ಅನೇಕ ಗುಂಪುಗಳಾಗಿ ವಿಂಗಡಿಸಬಹುದು.

1. ವಸ್ತುವಾಚಕ ಅಥವಾ ನಾಮವಾಚಕ :

ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು ವಸ್ತುವಾಚಕಗಳೆನ್ನುವರು.
ವಸ್ತುವಾಚಕನಾಮಪದವನ್ನು ಚೇತನ (ಚೇತನವುಳ್ಳ), ಅಚೇತನ (ಚೇತನವಿಲ್ಲದ್ದು) ಎಂದು ವಿಭಾಗಿಸಲಾಗಿದೆ.
ಉದಾ : ಮನುಷ್ಯ, ಪ್ರಾಣಿ, ಪಕ್ಷಿ ಇವು ಚೇತನವುಳ್ಳವು.
ನೆಲ, ಜಲ, ಹಣ್ಣು, ಕಾಯಿ, ಮನೆ, ಬೆಟ್ಟ ಇವು ಚೇತನವಿಲ್ಲದವು.

ವಸ್ತುವಾಚಕ ನಾಮಪದದಲ್ಲಿ ಮುಖ್ಯವಾಗಿ ಮೂರು ವಿಧಗಳು. ಅವುಗಳೆಂದರೆ…
1) ರೂಢನಾಮ
2) ಅಂಕಿತನಾಮ
3) ಅನ್ವರ್ಥನಾಮ

1) ರೂಢನಾಮ:- ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು.
ಉದಾ:- ಹಳ್ಳಿ, ಊರು, ನಗರ, ಪಟ್ಟಣ, ನದಿ, ಪರ್ವತ, ಬೆಟ್ಟ, ಕಾಡು, ಕೆರೆ, ಹಳ್ಳ, ಗಿಡ, ಎಲೆ, ಅಡಿಕೆ, ಬಳ್ಳಿ, ಬಂಡೆಗಲ್ಲು, ಹೊಳೆ, ಮರ, ಮನುಷ್ಯ, ದೇಶ, ಹುಡುಗಿ, ಹುಡುಗ, ಶಾಲೆ, ಮನೆ, ರಾಜ, ಹೆಂಗಸು, ಗಂಡಸು, ಮಕ್ಕಳು, ಹೆಣ್ಣು, ಜನರು, ಮುದುಕ, ಮುದುಕಿ, ಹಸು, ಎಮ್ಮೆ -ಮುಂತಾದವು.

2) ಅಂಕಿತನಾಮ:- ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.
ಉದಾ:- ಬ್ರಹ್ಮಪುತ್ರ, ಬೆಂಗಳೂರು, ಕಾವೇರಿ, ಹಿಮಾಲಯ, ಮನೀಶ್‌, ಬೇವು ಮುಂತಾದವು ಜೋಸೆಫ್, ಬೋರಣ್ಣ ಮುಂತಾದವು.

3) ಅನ್ವರ್ಥನಾಮ :- ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು
ಉದಾ:- ಕವಿ, ಮೂಗ, ನೀತಿಜ್ಞ, ಕುಂಟ, ಹೆಳವ, ಗಿಡ್ಡ, ಬೆಪ್ಪ, ಕ್ರೂರಿ, ಪೆದ್ದ, ಬುದ್ಧಿವಂತ, ಧೀರ, ಹೇಡಿ, ಸಾಧು, ಜಿಪುಣ, ಅಷ್ಟಾವಕ್ರ, ಶಿಕ್ಷಕ, ವ್ಯಾಪಾರಿ, ಯೋಗಿ, ರೋಗಿ, ಸನ್ಯಾಸಿ, ವೈದ್ಯ, ಶಿಕ್ಷಕಿ, ಪಂಡಿತ, ಮೂಕ, ವಿದ್ವಾಂಸ, ಪೂಜಾರಿ, ಕುರುಡ, ಜಾಣ, ಕಿವುಡ, ದಡ್ಡ, ವಿಜ್ಞಾನಿ, ದಾನಿ, ಅಭಿಮಾನಿ ಮುಂತಾದವು.

2) ಗುಣವಾಚಕ :

ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ ಗುಣವಾಚಕಗಳು. ವಿಶೇಷಣಗಳನ್ನು ಯಾವುದಕ್ಕೆ ಹೇಳಲಾಗುತ್ತದೋ ಅಂಥ ಶಬ್ದಗಳನ್ನು ವಿಶೇಷ್ಯಗಳು ಎನ್ನುತ್ತಾರೆ.

ವಿಶೇಷಣವಿಶೇಷ್ಯ
ಸಿಹಿಹಣ್ಣು
ದೊಡ್ಡನದಿ
ಒಳ್ಳೆಯಹುಡುಗಿ
ಕೆಟ್ಟಮನುಷ್ಯ
ದೊಡ್ಡದುಮರ
ಹಳತುಸಿರೆ

ಉದಾ:- ಕೆಂಪು, ದೊಡ್ಡ, ಚಿಕ್ಕ, ಹಳೆಯ, ಕರಿಯ, ಕಿರಿಯ, ಒಳ್ಳೆಯ, ಕೆಟ್ಟ, ಹೊಸದು, ದೊಡ್ಡದು ಇತ್ಯಾದಿ ಪದಗಳು.

3) ಸಂಖ್ಯಾವಾಚಕ :

ಸಂಖ್ಯೆಯನ್ನು ಸೂಚಿಸುವ ಪದಗಳೇ ಸಂಖ್ಯಾವಾಚಕಗಳು.
ಉದಾ : ಒಂದು, ಎರಡು, ಹತ್ತು, ನೂರೈದು, ಸಾವಿರ, ಲಕ್ಷ, ಕೋಟಿ ಇತ್ಯಾದಿ.

4) ಸಂಖ್ಯೇಯವಾಚಕ :

ಸಂಖ್ಯೆಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳು.

ಸಂಖ್ಯಾವಾಚಕಸಂಖ್ಯೇಯವಾಚಕ
ಒಂದುಒಬ್ಬ, ಒಬ್ಬಳು
ಎರಡುಇಬ್ಬರು, ಎರಡನೆಯ, ಇಮ್ಮಡಿ
ಮೂರುಮೂವರು, ಮೂರನೆಯ, ಮೂರರಿಂದ
ನಾಲ್ಕುನಾಲ್ವರು, ನಾಲ್ಕನೆಯ, ನಾಲ್ವರಿಂದ
ಐದುಐವರು, ಪಂಚಾಮೃತ

ಹೀಗೆ-ಸಂಖ್ಯೆಯಿಂದ ಕೂಡಿರುವ ವಸ್ತುಗಳನ್ನು ಹೇಳುವ ಪದಗಳೆಲ್ಲ ಸಂಖ್ಯೇಯ ವಾಚಕಗಳು (ಎರಡನೆಯ, ನಾಲ್ಕನೆಯ, ಹತ್ತನೆಯ ಇತ್ಯಾದಿ) ಇವುಗಳನ್ನು ಇತ್ತೀಚೆಗೆ ಎರಡನೇ, ನಾಲ್ಕನೇ, ಹತ್ತನೇ ಎಂದೂ ಸಹಾ ಕೆಲವರು ಬಳಸುತ್ತಿದ್ದಾರೆ.

5) ಭಾವನಾಮ :

ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು.
ಓಹೋ, ಅಯ್ಯೋ, ಅಬ್ಬಬ್ಬ
ಉದಾ : ಕೆಚ್ಚನೆಯದರ ಭಾವ – ಕೆಂಪು
ಬಿಳಿದರ ಭಾವ – ಬಿಳುಪು
ಹಿರಿದರ ಭಾವ – ಹಿರಿಮೆ
ನೋಡುವುದರ ಭಾವ- ನೋಟ
ಆಡುವುದರ ಭಾವ – ಆಟ
ಮಾಡುವುದರ ಭಾವ = ಮಾಟ

6) ಪರಿಮಾಣವಾಚಕ :

ವಸ್ತುಗಳ ಸಾಮಾನ್ಯ ಅಳತೆ, ಪರಮಾಣ, ಗಾತ್ರ-ತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಳೆನ್ನುವರು.
ಉದಾ:- ಅಷ್ಟು, ಇಷ್ಟು, ಹಲವು, ಕೆಲವು, ಅನಿತು
`ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು?’
`ಇಷ್ಟು ಜನರು ಇಲ್ಲಿ ಸೇರಿ ಏನು ಮಾಡುತ್ತಾರೆ?’
`ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ?’
– ಈ ವಾಕ್ಯಗಳಲ್ಲಿ `ಅಷ್ಟು’ `ಇಷ್ಟು’, `ಎಷ್ಟು’ ಎಂಬ ಪದಗಳಿವೆ. ಈ ಪದಗಳು ನಿರ್ದಿಷ್ಟ ಅಳತೆ, ಸಂಖ್ಯೆಗಳನ್ನು ಹೇಳುವುದಿಲ್ಲ. ಕೇವಲ ಪರಿಮಾಣ ಅಥವಾ ಗಾತ್ರವನ್ನು ಸೂಚಿಸುತ್ತವೆ. ಹೀಗೆ – ವಸ್ತುವಿನ ಪರಿಮಾಣ, ಗಾತ್ರವನ್ನು ಹೇಳುವ `ಅಷ್ಟು’, `ಇಷ್ಟು’, `ಹಲವು’, `ಕೆಲವು’, `ಎನಿತು’, `ಅನಿತು’ ಆಸು, ಈಸು, ಏಸು ಮುಂತಾದ ಪದಗಳೇ `ಪರಿಮಾಣವಾಚಕ’ಗಳು.

ಪರಿಮಾಣ – ಹಲವು, ಕೆಲವು. (ಹಲವು ನದಿಗಳು, ಕೆಲವು ಹಣ್ಣುಗಳು)
ಗಾತ್ರ – ಅಷ್ಟು, ಇಷ್ಟು (ಗುಡ್ಡದಷ್ಟು, ಆನೆಯಷ್ಟು)
ಅಳತೆ – ಅಷ್ಟು, ಇಷ್ಟು (ಅಷ್ಟು ದೂರ, ಇಷ್ಟು ಪುಸ್ತಕಗಳು) – ಇತ್ಯಾದಿ.
ಹಲವು, ಅನಿತು, ಇತಿತು

7) ಪ್ರಕಾರವಾಚಕಗಳು:

ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು
ಬಗೆಯ ಗುಣವಾಚಕಗಳೇ ಅಹುದು.
ಉದಾ:- ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ, ಎಂಥ, ಇಂಥದು, ಅಂತಹುದು, ಇಂತಹುದು, ಅಂಥವನು, ಅಂಥವಳು, ಅಂಥದು, ಅಂತಹವನು, ಇಂತಹವನು

8) ದಿಗ್ವಾಚಕ :

ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು.
ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.

9) ಸರ್ವನಾಮ :

ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು
ಉದಾ:- ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ.
ರಾಮ ಅಜ್ಜನ ಮನೆಗೆ ಹೊರಟನು. ಅವನ ತಮ್ಮ ನೀರಜ`ನಾನೂ ಬರುತ್ತೇನೆ’ ಎಂದನು. ತಂಗಿ ರಾಜೀವಿ `ತಾನೂ ಬರುವೆನೆಂದಳು’. ಆಗ ರಾಮ`ನೀವು ಇಬ್ಬರೂ ಆದಷ್ಟು ಬೇಗ ತಯಾರಾಗಿರಿ’ ಎಂದನು. ಇಲ್ಲಿ ಅವನ, ನಾನೂ, ತಾನೂ, ನೀವು ಎಂಬ
ಪದಗಳು ಬೇರೆ ಬೇರೆ ನಾಮಪದಗಳ ಬದಲಿಗೆ ಪ್ರಯೋಗಿಸಲ್ಪಟ್ಟವು. ಹೀಗೆ -ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕಾರ‍್ಯವನ್ನು ನಿರ್ವಹಿಸುವ ಪದಗಳೇ ಸರ್ವನಾಮಗಳು. ಈ ಸರ್ವನಾಮಗಳನ್ನು

1) ಪುರುಷಾರ್ಥಕ
2) ಪ್ರಶ್ನಾರ್ಥಕ
3) ಆತ್ಮಾರ್ಥಕ ಸರ್ವನಾಮಗಳೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

1) ಪುರುಷಾರ್ಥಕ ಸರ್ವನಾಮ : ಇದನ್ನು ಮತ್ತೆ ಮೂರು ವಿಭಾಗ ಮಾಡಿದೆ.
– ಉತ್ತಮ ಪುರುಷ : ನಾನು ನಾವು
– ಮಧ್ಯಮ ಪುರುಷ : ನೀನು ನೀವ
– ಪ್ರಥಮ ಪುರುಷ/ಅನ್ಯ ಪರುಷ : ಅವನು – ಇವನು ಅವಳು – ಇವಳು
ಅವರು – ಇವರು ಅದು – ಅವು ಇದು – ಇವು
(ಇತ್ತೀಚೆಗೆ ಇವುಗಳನ್ನು ಪ್ರಥಮ, ದ್ವಿತೀಯ, ತೃತೀಯ ಪುರುಷಗಳೆಂದು ಹೇಳುವ ವಾಡಿಕೆ ಆರಂಭವಾಗಿದೆ.)

2) ಆತ್ಮಾರ್ಥಕ ಸರ್ವನಾಮ : ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸೆಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಾರ್ಥಕ ಸರ್ವನಾಮ’
ಎನ್ನುತ್ತಾರೆ. ಇವು ಸಾಮಾನ್ಯವಾಗಿ ಪ್ರಥಮ ಹಾಗೂ ಮಧ್ಯಮ ಪುರುಷದ ಅರ್ಥವನ್ನೇ ನೀಡುತ್ತವೆ.
ಉದಾ : ತಾನು, ತಾವು, ತನ್ನ, ತಮ್ಮ.

3) ಪ್ರಶ್ನಾರ್ಥಕ ಸರ್ವನಾಮ : ಪ್ರಶ್ನೆಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನಲಾಗುತ್ತದೆ.
ಉದಾ:- ಯಾವುವು? ಏಕೆ? ಏನು? ಯಾವುದು? ಯಾರು? ಏತರದು? ಆವುದು?