ನಾಮಪದಗಳು
ನಾಮಪದಗಳು: ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ.
ಮುಖ್ಯ ಅಂಶಗಳ ಪರಿವಿಡಿ
Toggleನಾಮಪದದ ವಿಧಗಳು
- ವಸ್ತುವಾಚಕ ಅಥವಾ ನಾಮವಾಚಕ,
- ಗುಣವಾಚಕ,
- ಸಂಖ್ಯಾವಾಚಕ,
- ಸಂಖ್ಯೇಯವಾಚಕ,
- ಭಾವನಾಮ,
- ಪರಿಮಾಣ ವಾಚಕ,
- ಪ್ರಕಾರವಾಚಕ
- ದಿಗ್ವಾಚಕ,
- ಸರ್ವನಾಮ ಎಂಬುದಾಗಿ ಅನೇಕ ಗುಂಪುಗಳಾಗಿ ವಿಂಗಡಿಸಬಹುದು.
1. ವಸ್ತುವಾಚಕ ಅಥವಾ ನಾಮವಾಚಕ :
ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು ವಸ್ತುವಾಚಕಗಳೆನ್ನುವರು.
ವಸ್ತುವಾಚಕನಾಮಪದವನ್ನು ಚೇತನ (ಚೇತನವುಳ್ಳ), ಅಚೇತನ (ಚೇತನವಿಲ್ಲದ್ದು) ಎಂದು ವಿಭಾಗಿಸಲಾಗಿದೆ.
ಉದಾ : ಮನುಷ್ಯ, ಪ್ರಾಣಿ, ಪಕ್ಷಿ ಇವು ಚೇತನವುಳ್ಳವು.
ನೆಲ, ಜಲ, ಹಣ್ಣು, ಕಾಯಿ, ಮನೆ, ಬೆಟ್ಟ ಇವು ಚೇತನವಿಲ್ಲದವು.
ವಸ್ತುವಾಚಕ ನಾಮಪದದಲ್ಲಿ ಮುಖ್ಯವಾಗಿ ಮೂರು ವಿಧಗಳು. ಅವುಗಳೆಂದರೆ…
1) ರೂಢನಾಮ
2) ಅಂಕಿತನಾಮ
3) ಅನ್ವರ್ಥನಾಮ
1) ರೂಢನಾಮ:- ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು.
ಉದಾ:- ಹಳ್ಳಿ, ಊರು, ನಗರ, ಪಟ್ಟಣ, ನದಿ, ಪರ್ವತ, ಬೆಟ್ಟ, ಕಾಡು, ಕೆರೆ, ಹಳ್ಳ, ಗಿಡ, ಎಲೆ, ಅಡಿಕೆ, ಬಳ್ಳಿ, ಬಂಡೆಗಲ್ಲು, ಹೊಳೆ, ಮರ, ಮನುಷ್ಯ, ದೇಶ, ಹುಡುಗಿ, ಹುಡುಗ, ಶಾಲೆ, ಮನೆ, ರಾಜ, ಹೆಂಗಸು, ಗಂಡಸು, ಮಕ್ಕಳು, ಹೆಣ್ಣು, ಜನರು, ಮುದುಕ, ಮುದುಕಿ, ಹಸು, ಎಮ್ಮೆ -ಮುಂತಾದವು.
2) ಅಂಕಿತನಾಮ:- ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.
ಉದಾ:- ಬ್ರಹ್ಮಪುತ್ರ, ಬೆಂಗಳೂರು, ಕಾವೇರಿ, ಹಿಮಾಲಯ, ಮನೀಶ್, ಬೇವು ಮುಂತಾದವು ಜೋಸೆಫ್, ಬೋರಣ್ಣ ಮುಂತಾದವು.
3) ಅನ್ವರ್ಥನಾಮ :- ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು
ಉದಾ:- ಕವಿ, ಮೂಗ, ನೀತಿಜ್ಞ, ಕುಂಟ, ಹೆಳವ, ಗಿಡ್ಡ, ಬೆಪ್ಪ, ಕ್ರೂರಿ, ಪೆದ್ದ, ಬುದ್ಧಿವಂತ, ಧೀರ, ಹೇಡಿ, ಸಾಧು, ಜಿಪುಣ, ಅಷ್ಟಾವಕ್ರ, ಶಿಕ್ಷಕ, ವ್ಯಾಪಾರಿ, ಯೋಗಿ, ರೋಗಿ, ಸನ್ಯಾಸಿ, ವೈದ್ಯ, ಶಿಕ್ಷಕಿ, ಪಂಡಿತ, ಮೂಕ, ವಿದ್ವಾಂಸ, ಪೂಜಾರಿ, ಕುರುಡ, ಜಾಣ, ಕಿವುಡ, ದಡ್ಡ, ವಿಜ್ಞಾನಿ, ದಾನಿ, ಅಭಿಮಾನಿ ಮುಂತಾದವು.
2) ಗುಣವಾಚಕ :
ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ ಗುಣವಾಚಕಗಳು. ವಿಶೇಷಣಗಳನ್ನು ಯಾವುದಕ್ಕೆ ಹೇಳಲಾಗುತ್ತದೋ ಅಂಥ ಶಬ್ದಗಳನ್ನು ವಿಶೇಷ್ಯಗಳು ಎನ್ನುತ್ತಾರೆ.
ವಿಶೇಷಣ | ವಿಶೇಷ್ಯ |
---|---|
ಸಿಹಿ | ಹಣ್ಣು |
ದೊಡ್ಡ | ನದಿ |
ಒಳ್ಳೆಯ | ಹುಡುಗಿ |
ಕೆಟ್ಟ | ಮನುಷ್ಯ |
ದೊಡ್ಡದು | ಮರ |
ಹಳತು | ಸಿರೆ |
ಉದಾ:- ಕೆಂಪು, ದೊಡ್ಡ, ಚಿಕ್ಕ, ಹಳೆಯ, ಕರಿಯ, ಕಿರಿಯ, ಒಳ್ಳೆಯ, ಕೆಟ್ಟ, ಹೊಸದು, ದೊಡ್ಡದು ಇತ್ಯಾದಿ ಪದಗಳು.
3) ಸಂಖ್ಯಾವಾಚಕ :
ಸಂಖ್ಯೆಯನ್ನು ಸೂಚಿಸುವ ಪದಗಳೇ ಸಂಖ್ಯಾವಾಚಕಗಳು.
ಉದಾ : ಒಂದು, ಎರಡು, ಹತ್ತು, ನೂರೈದು, ಸಾವಿರ, ಲಕ್ಷ, ಕೋಟಿ ಇತ್ಯಾದಿ.
4) ಸಂಖ್ಯೇಯವಾಚಕ :
ಸಂಖ್ಯೆಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳು.
ಸಂಖ್ಯಾವಾಚಕ | ಸಂಖ್ಯೇಯವಾಚಕ |
---|---|
ಒಂದು | ಒಬ್ಬ, ಒಬ್ಬಳು |
ಎರಡು | ಇಬ್ಬರು, ಎರಡನೆಯ, ಇಮ್ಮಡಿ |
ಮೂರು | ಮೂವರು, ಮೂರನೆಯ, ಮೂರರಿಂದ |
ನಾಲ್ಕು | ನಾಲ್ವರು, ನಾಲ್ಕನೆಯ, ನಾಲ್ವರಿಂದ |
ಐದು | ಐವರು, ಪಂಚಾಮೃತ |
ಹೀಗೆ-ಸಂಖ್ಯೆಯಿಂದ ಕೂಡಿರುವ ವಸ್ತುಗಳನ್ನು ಹೇಳುವ ಪದಗಳೆಲ್ಲ ಸಂಖ್ಯೇಯ ವಾಚಕಗಳು (ಎರಡನೆಯ, ನಾಲ್ಕನೆಯ, ಹತ್ತನೆಯ ಇತ್ಯಾದಿ) ಇವುಗಳನ್ನು ಇತ್ತೀಚೆಗೆ ಎರಡನೇ, ನಾಲ್ಕನೇ, ಹತ್ತನೇ ಎಂದೂ ಸಹಾ ಕೆಲವರು ಬಳಸುತ್ತಿದ್ದಾರೆ.
5) ಭಾವನಾಮ :
ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು.
ಓಹೋ, ಅಯ್ಯೋ, ಅಬ್ಬಬ್ಬ
ಉದಾ : ಕೆಚ್ಚನೆಯದರ ಭಾವ – ಕೆಂಪು
ಬಿಳಿದರ ಭಾವ – ಬಿಳುಪು
ಹಿರಿದರ ಭಾವ – ಹಿರಿಮೆ
ನೋಡುವುದರ ಭಾವ- ನೋಟ
ಆಡುವುದರ ಭಾವ – ಆಟ
ಮಾಡುವುದರ ಭಾವ = ಮಾಟ
6) ಪರಿಮಾಣವಾಚಕ :
ವಸ್ತುಗಳ ಸಾಮಾನ್ಯ ಅಳತೆ, ಪರಮಾಣ, ಗಾತ್ರ-ತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಳೆನ್ನುವರು.
ಉದಾ:- ಅಷ್ಟು, ಇಷ್ಟು, ಹಲವು, ಕೆಲವು, ಅನಿತು
`ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು?’
`ಇಷ್ಟು ಜನರು ಇಲ್ಲಿ ಸೇರಿ ಏನು ಮಾಡುತ್ತಾರೆ?’
`ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ?’
– ಈ ವಾಕ್ಯಗಳಲ್ಲಿ `ಅಷ್ಟು’ `ಇಷ್ಟು’, `ಎಷ್ಟು’ ಎಂಬ ಪದಗಳಿವೆ. ಈ ಪದಗಳು ನಿರ್ದಿಷ್ಟ ಅಳತೆ, ಸಂಖ್ಯೆಗಳನ್ನು ಹೇಳುವುದಿಲ್ಲ. ಕೇವಲ ಪರಿಮಾಣ ಅಥವಾ ಗಾತ್ರವನ್ನು ಸೂಚಿಸುತ್ತವೆ. ಹೀಗೆ – ವಸ್ತುವಿನ ಪರಿಮಾಣ, ಗಾತ್ರವನ್ನು ಹೇಳುವ `ಅಷ್ಟು’, `ಇಷ್ಟು’, `ಹಲವು’, `ಕೆಲವು’, `ಎನಿತು’, `ಅನಿತು’ ಆಸು, ಈಸು, ಏಸು ಮುಂತಾದ ಪದಗಳೇ `ಪರಿಮಾಣವಾಚಕ’ಗಳು.
ಪರಿಮಾಣ – ಹಲವು, ಕೆಲವು. (ಹಲವು ನದಿಗಳು, ಕೆಲವು ಹಣ್ಣುಗಳು)
ಗಾತ್ರ – ಅಷ್ಟು, ಇಷ್ಟು (ಗುಡ್ಡದಷ್ಟು, ಆನೆಯಷ್ಟು)
ಅಳತೆ – ಅಷ್ಟು, ಇಷ್ಟು (ಅಷ್ಟು ದೂರ, ಇಷ್ಟು ಪುಸ್ತಕಗಳು) – ಇತ್ಯಾದಿ.
ಹಲವು, ಅನಿತು, ಇತಿತು
7) ಪ್ರಕಾರವಾಚಕಗಳು:
ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು
ಬಗೆಯ ಗುಣವಾಚಕಗಳೇ ಅಹುದು.
ಉದಾ:- ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ, ಎಂಥ, ಇಂಥದು, ಅಂತಹುದು, ಇಂತಹುದು, ಅಂಥವನು, ಅಂಥವಳು, ಅಂಥದು, ಅಂತಹವನು, ಇಂತಹವನು
8) ದಿಗ್ವಾಚಕ :
ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು.
ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.
9) ಸರ್ವನಾಮ :
ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು
ಉದಾ:- ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ.
ರಾಮ ಅಜ್ಜನ ಮನೆಗೆ ಹೊರಟನು. ಅವನ ತಮ್ಮ ನೀರಜ`ನಾನೂ ಬರುತ್ತೇನೆ’ ಎಂದನು. ತಂಗಿ ರಾಜೀವಿ `ತಾನೂ ಬರುವೆನೆಂದಳು’. ಆಗ ರಾಮ`ನೀವು ಇಬ್ಬರೂ ಆದಷ್ಟು ಬೇಗ ತಯಾರಾಗಿರಿ’ ಎಂದನು. ಇಲ್ಲಿ ಅವನ, ನಾನೂ, ತಾನೂ, ನೀವು ಎಂಬ
ಪದಗಳು ಬೇರೆ ಬೇರೆ ನಾಮಪದಗಳ ಬದಲಿಗೆ ಪ್ರಯೋಗಿಸಲ್ಪಟ್ಟವು. ಹೀಗೆ -ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕಾರ್ಯವನ್ನು ನಿರ್ವಹಿಸುವ ಪದಗಳೇ ಸರ್ವನಾಮಗಳು. ಈ ಸರ್ವನಾಮಗಳನ್ನು
1) ಪುರುಷಾರ್ಥಕ
2) ಪ್ರಶ್ನಾರ್ಥಕ
3) ಆತ್ಮಾರ್ಥಕ ಸರ್ವನಾಮಗಳೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
1) ಪುರುಷಾರ್ಥಕ ಸರ್ವನಾಮ : ಇದನ್ನು ಮತ್ತೆ ಮೂರು ವಿಭಾಗ ಮಾಡಿದೆ.
– ಉತ್ತಮ ಪುರುಷ : ನಾನು ನಾವು
– ಮಧ್ಯಮ ಪುರುಷ : ನೀನು ನೀವ
– ಪ್ರಥಮ ಪುರುಷ/ಅನ್ಯ ಪರುಷ : ಅವನು – ಇವನು ಅವಳು – ಇವಳು
ಅವರು – ಇವರು ಅದು – ಅವು ಇದು – ಇವು
(ಇತ್ತೀಚೆಗೆ ಇವುಗಳನ್ನು ಪ್ರಥಮ, ದ್ವಿತೀಯ, ತೃತೀಯ ಪುರುಷಗಳೆಂದು ಹೇಳುವ ವಾಡಿಕೆ ಆರಂಭವಾಗಿದೆ.)
2) ಆತ್ಮಾರ್ಥಕ ಸರ್ವನಾಮ : ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸೆಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಾರ್ಥಕ ಸರ್ವನಾಮ’
ಎನ್ನುತ್ತಾರೆ. ಇವು ಸಾಮಾನ್ಯವಾಗಿ ಪ್ರಥಮ ಹಾಗೂ ಮಧ್ಯಮ ಪುರುಷದ ಅರ್ಥವನ್ನೇ ನೀಡುತ್ತವೆ.
ಉದಾ : ತಾನು, ತಾವು, ತನ್ನ, ತಮ್ಮ.
3) ಪ್ರಶ್ನಾರ್ಥಕ ಸರ್ವನಾಮ : ಪ್ರಶ್ನೆಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನಲಾಗುತ್ತದೆ.
ಉದಾ:- ಯಾವುವು? ಏಕೆ? ಏನು? ಯಾವುದು? ಯಾರು? ಏತರದು? ಆವುದು?