ವಿಭಕ್ತಿ ಪ್ರತ್ಯಯ
‘ರಾಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು’ ಈ ವಾಕ್ಯವು – ರಾಮ, ತಾನು, ಬಲಗಾಲು, ಚೆಂಡು – ಹೀಗೆ ಕೇವಲ ನಾಮಪ್ರಕೃತಿಗಳನ್ನೇ ಹೇಳಿ ಒದೆದನು ಎಂದಿದ್ದರೆ ಅರ್ಥವಾಗುತ್ತಿರಲಿಲ್ಲ. ‘ರಾಮ, ತಾನು, ಬಲಗಾಲು, ಚೆಂಡು’ ಈ ನಾಲ್ಕು ಪ್ರಕೃತಿಗಳಿಗೆ ಪರಸ್ಪರ ವಾಕ್ಯದಲ್ಲಿ ಒಂದು ಸಂಬಂಧವಿದೆ. ಈ ಸಂಬಂಧವನ್ನು ವಿಭಕ್ತಿ ಪ್ರತ್ಯಯಗಳು ಉಂಟುಮಾಡುತ್ತವೆ. ಈ ರೀತಿ ನಾಮಪ್ರಕೃತಿಗೆ ಸೇರುವ ಪ್ರತ್ಯಯಗಳನ್ನು ‘ವಿಭಕ್ತಿ ಪ್ರತ್ಯಯಗಳು’ ಎನ್ನುತ್ತಾರೆ.
ಮುಖ್ಯ ಅಂಶಗಳ ಪರಿವಿಡಿ
Toggle(ನಾಮಪ್ರಕೃತಿ + ವಿಭಕ್ತಿ ಪ್ರತ್ಯಯ = ನಾಮಪದ)
ವಿಭಕ್ತಿ ಪ್ರತ್ಯಯ ಎಂದರೇನು?
ಸ್ವತಂತ್ರವಾದ ಅರ್ಥವಿಲ್ಲದೆ ನಾಮಪ್ರಕೃತಿಗಳ ಮುಂದೆ ಸೇರಿ ಬೇರೆ-ಬೇರೆ ಅರ್ಥವನ್ನುಂಟು ಮಾಡುವ ‘ಉ’, ‘ಅನ್ನು’, ‘ಇಂದ’, ‘ಗೆ’, ‘ಕ್ಕೆ’, ‘ದೆಸೆಯಿಂದ’, ‘ಅ’, ‘ಅಲ್ಲಿ’ ಗಳಿಗೆ ʼವಿಭಕ್ತಿ ಪ್ರತ್ಯಯʼಗಳೆನ್ನುವರು.
ವಿಭಕ್ತಿ ಪ್ರತ್ಯಯದ ವಿಧಗಳು
- ಪ್ರಥಮಾ
- ದ್ವಿತೀಯಾ
- ತೃತೀಯಾ
- ಚತುರ್ಥೀ
- ಪಂಚಮೀ
- ಷಷ್ಠೀ
- ಸಪ್ತಮೀ ಎಂಬುದಾಗಿ 7 ಗುಂಪುಗಳಾಗಿ ವಿಂಗಡಿಸಬಹುದು.
ವಿಭಕ್ತಿ ಪ್ರತ್ಯಯದ 7 ಪ್ರಕಾರಗಳು:
ಕ್ರಿಯಾಪದದೊಂದಿಗೆ ನಾಮಪದದ ಸಂಬಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ ಮುಂತಾದುವು ಕಾರಕಾರ್ಥಗಳು. ಕಾರಕಾರ್ಥವನ್ನು ವಿಭಜಿಸಿ ಹೇಳುವ ಪ್ರತ್ಯಯಗಳೇ ವಿಭಕ್ತಿಪ್ರತ್ಯಯಗಳು. ವಿಭಕ್ತಿಗಳಲ್ಲಿ ಏಳು ವಿಧಗಳಿವೆ.
ವಿಭಕ್ತಿ | ಕಾರಕಾರ್ಥಕಗಳು | ಹೊಸಗನ್ನಡ ಪತ್ಯಯ | ಏಕವಚನ | ಬಹುವಚನ | ಹಳಗನ್ನಡ ಪತ್ಯಯ | ಏಕವಚನ | ಬಹುವಚನ |
ಪ್ರಥಮಾ | ಕರ್ತ್ರರ್ಥ | ಉ | ಅರಸನು | ಅರಸರು | ಮ್ | ಅರಸಂ | ಅರಸರ್ |
ದ್ವಿತೀಯಾ | ಕರ್ಮಾರ್ಥ | ಅನ್ನು | ಅರಸನನ್ನು | ಅರಸರನ್ನು | ಅಂ | ಅರಸನಂ | ಅರಸರಂ |
ತೃತೀಯಾ | ಕರಣಾರ್ಥ (ಸಾಧನ) | ಇಂದ | ಅರಸನಿಂದ | ಅರಸರಿಂದ | ಇಂ, ಇಂದಂ, ಇಂದೆ | ಅರಸನಿಂ ಅರಸನಿಂದಂ ಅರಸನಿಂದೆ | ಅರಸರಿಂ ಅರಸರಿಂದಂ ಅರಸರಂದೆ |
ಚತುರ್ಥೀ | ಸಂಪ್ರದಾನ (ಕೊಡುವಿಕೆ) | ಇಗೆ, ಗೆ, ಕೆ, ಅಕ್ಕೆ | ಅರಸನಿಗೆ | ಅರಸರಿಗೆ | ಗೆ, ಕೆ, ಕ್ಕೆ | ಅರಸಂಗೆ | ಅರಸರ್ಗೆ |
ಪಂಚಮೀ | ಅಪಾದಾನ (ಅಗಲುವಿಕೆ) | ದೆಸೆಯಿಂದ | ರಾಜನ ದೆಸೆಯಿಂದ | ರಾಜರದೆ ಸೆಯಿಂದ | ಅತ್ತಣಿಂ, ಅತ್ತಣಿಂದಂ ಅತ್ತಣಿಂದೆ | ಅರಸನತ್ತಣಿಂ ಅರಸನತ್ತಣಿಂದಂ ಅರಸನತ್ತಣಿಂದೆ | ಅರಸರತ್ತಣಿಂ ಅರಸರತ್ತಣಿಂದಂ ಅರಸರತ್ತಣಿಂದೆ |
ಷಷ್ಠೀ | ಸಂಬಂಧ | ಅ | ಅರಸನ | ಅರಸರ | ಅ | ಅರಸನ | ಅರಸರ |
ಸಪ್ತಮೀ | ಅಧಿಕರಣ (ಆಧಾರ) | ಅಲ್ಲಿ ಅಲಿ ಒಳು | ಅರಸನಲ್ಲಿ ಅರಸನಲಿ ಅರಸನೊಳು | ಅರಸರಲ್ಲಿ ಅರಸರಲಿ ಅರಸರೊಳು | ಓಳ್ | ಅರಸನೊಳ್ | ಅರಸರೊಳ್ |
ಸಂಬೋಧನಾ | ಅಭಿಮುಖೀಕರಣ (ಕರೆಯುವಿಕೆ) | ಆ, ಏ, ಇರಾ, ಈ | ಅರಸನೇ |
| ಆ, ಏ, ಇರಾ, ಈ |
|
|
ಸೂಚನೆ: ಕನ್ನಡದಲ್ಲಿ ೭ ವಿಭಕ್ತಿ ಪ್ರತ್ಯಯಗಳು ಮಾತ್ರ ಇದ್ದು ಸಂಬೋಧನಾ ವಿಭಕ್ತಿಯನ್ನು ಕನ್ನಡ ವಿಭಕ್ತಿಗಳಿಂದ ಕೈಬಿಡಲಾಗಿದೆ. ಆದರೆ ಸಂಸ್ಕೃತದಲ್ಲಿ ಸಂಬೋಧನೆಯು ಸೇರಿ ಒಟ್ಟು 8 ವಿಭಕ್ತಿ ಪ್ರತ್ಯಯಗಳಿದ್ದು ಪರೀಕ್ಷಾ ದೃಷ್ಟಿಯಿಂದ ಎಂಟೂ ವಿಭ್ಕಕ್ತಿ ಪ್ರತ್ಯಯಗಳನ್ನು ತಿಳಿದಿರಬೇಕಾದುದು ಅವಶ್ಯಯಕ. |
ಮುಖ್ಯವಾದ ಅಂಶಗಳು
- ವಿಭಕ್ತಿ ಪ್ರತ್ಯಯಗಳಿಗೆ ಸ್ವತಂತ್ರವಾದ ಅರ್ಥ ಇರುವುದಿಲ್ಲ.
- ನಾಮಪ್ರಕೃತಿಗಳಿಗೆ ಸ್ವತಂತ್ರವಾದ ಅರ್ಥವಿದ್ದರು ವಾಕ್ಯದ ಅರ್ಥವನ್ನು ಪೂರ್ಣಗೊಳಿಸಲು ವಿಭಕ್ತಿ ಪ್ರತ್ಯಯಗಳನ್ನು ನಾಮಪ್ರಕೃತಿಗೆ ಸೇರಿಸಬೇಕು.
- ವಿಭಕ್ತಿಗಳು ಏಳು ಇದ್ದರೂ ಕಾರಕ ಆರು ಮಾತ್ರ. ಷಪ್ಠೀ ವಿಭಕ್ತಿ ಪ್ರತ್ಯಯ ‘ಅ’ ಎಂಬುದು ಕ್ರಿಯೆಗೆ ನೇರವಾಗಿ ಸಂಬಂಧಪಡದಿರುವುದರಿಂದ ಅದನ್ನು ಕಾರಕ ಎಂದು ಕರೆಯಲಾಗುವುದಿಲ್ಲ. ‘ರಾಜನ’ ಎಂಬ ಷಷ್ಠೀ ವಿಭಕ್ತಿಯಿಂದ ಕೂಡಿದ ಪದದ ಮುಂದೆ ನೇರವಾಗಿ ಕ್ರಿಯಾಪದವನ್ನು ಇರಿಸಲು ಸಾಧ್ಯವಿಲ್ಲ.
- ವಿಭಕ್ತಿ ಪ್ರತ್ಯಯಗಳಿಗೆ ಸ್ವತಂತ್ರವಾದ ಅರ್ಥವಿಲ್ಲದೆ ಇದ್ದರು ನಾಮಪ್ರಕೃತಿಗಳ ಮುಂದೆ ಸೇರಿಸಿ ಬೇರೆ-ಬೇರೆ ಅರ್ಥವನ್ನುಂಟುಮಾಡುತ್ತವೆ. ಉದಾ:
ಪರಶುರಾಮನು ಮನೆ ಬಂದನು.
(ವಾಕ್ಯದ ಅರ್ಥವು ಸ್ಪಷ್ಟವಾಗಿಲ್ಲ/ ನಮಗೆ ಸರಿಯಾಗಿ ಅರ್ಥವಾಗುವುದಿಲ್ಲ)
- ಪರಶುರಾಮ ಮನೆಗೆ ಬಂದನು. (ಮನೆ+ಗೆ)
- ಪರಶುರಾಮನು ಮನೆಯಿಂದ ಬಂದನು. (ಮನೆ+ಇಂದ)
- ಹಳೆಗನ್ನಡ ವಿಭಕ್ತಿ ಪ್ರತ್ಯಯ ಕುರಿತು ಭಟ್ಟಾಕಳಂಕನ ಸೂತ್ರ: ಮಮಿಂಗೆತ್ತಣಿಮದೊಳ್
- ವಿಭಕ್ತಿ ಪ್ರತ್ಯಯಗಳನ್ನು ಏಕವಚನ ಮತ್ತು ಬಹುವಚನಗಳೆರಡರಲ್ಲೂ ಪ್ರಯೋಗಿಸಲ್ಪಡುತ್ತವೆ
ವಿಭಕ್ತಿಗಳು ಏಳು ಇದ್ದರೂ ಕಾರಕ ಆರು ಮಾತ್ರ. ಷಪ್ಠೀ ವಿಭಕ್ತಿ ಪ್ರತ್ಯಯ ‘ಅ’ ಎಂಬುದು ಕ್ರಿಯೆಗೆ ನೇರವಾಗಿ ಸಂಬಂಧಪಡದಿರುವುದರಿಂದ ಅದನ್ನು ಕಾರಕ ಎಂದು ಕರೆಯಲಾಗುವುದಿಲ್ಲ. ‘ರಾಜನ’ ಎಂಬ ಷಷ್ಠೀ ವಿಭಕ್ತಿಯಿಂದ ಕೂಡಿದ ಪದದ ಮುಂದೆ ನೇರವಾಗಿ ಕ್ರಿಯಾಪದವನ್ನು ಇರಿಸಲು ಸಾಧ್ಯವಿಲ್ಲ.
ವಿಭಕ್ತಿ ಪಲ್ಲಟ :
ನಾವು ಮಾತನಾಡುವಾಗ ಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಬೇಕೋ ಅದನ್ನು ಬಳಸದೆ ಬೇರೆ ವಿಭಕ್ತಿ ಪ್ರತ್ಯಯವನ್ನು ಬಳಸಿ ಮಾತಾನಾಡುವುದುಂಟು. ಹೀಗೆ ಒಂದು ವಿಭಕ್ತಿ ಪ್ರತ್ಯಯದ ಬದಲಿಗೆ ಅರ್ಥ ವ್ಯತ್ಯಾಸವಾಗದಂತೆ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮಕ್ಕೆ ‘ವಿಭಕ್ತಿ ಪಲ್ಲಟ’ ಎಂದು ಹೇಳುತ್ತೇವೆ.
ದ್ವಿತೀಯಾ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ –
– ಊರನ್ನು ಸೇರಿದನು (ದ್ವಿತೀಯಾ) ಊರಿಗೆ ಸೇರಿದನು (ಚತುರ್ಥೀ)
– ಬೆಟ್ಟವನ್ನು ಹತ್ತಿದನು (ದ್ವಿತೀಯಾ) ಬೆಟ್ಟಕ್ಕೆ ಹತ್ತಿದನು. (ಚತುರ್ಥೀ)
ಪಂಚಮೀ ಬದಲಿಗೆ ತೃತೀಯಾ ವಿಭಕ್ತಿ ಸೇರಿದಾಗ –
– ಮರದ ದೆಸೆಯಿಂದ ಹಣ್ಣು ಬಿತ್ತು (ಪಂಚಮೀ)
ಮರದಿಂದ ಹಣ್ಣು ಬಿತ್ತು (ತೃತೀಯಾ)
– ಕೌರವನ ದೆಸೆಯಿಂದ ಕೇಡಾಯ್ತು (ಪಂಚಮೀ)
– ಕೌರವನಿಂದ ಕೇಡಾಯ್ತು (ತೃತೀಯಾ)
ಷಷ್ಠೀ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ
– ನಮ್ಮ ಚಿಕ್ಕಪ್ಪ (ಷಷ್ಠೀ) ನಮಗೆ ಚಿಕ್ಕಪ್ಪ (ಚತುರ್ಥೀ)
– ಅಯೋಧ್ಯೆಯ ರಾಜ (ಷಷ್ಠೀ) ಅಯೋಧ್ಯೆಗೆ ರಾಜ (ಚತುರ್ಥೀ)
ಕೆಳಗಿನ ವಾಕ್ಯಗಳನ್ನು ಓದಿ ವ್ಯತ್ಯಾಸ ತಿಳಿಯಿರಿ.
ಅ) ಇರುವೆಯು ಬಂದಿತು. (ಇರುವೆ+ಉ=ಇರುವೆಯು)
ಆ) ಇರುವೆ ಬಂದಿತು.
ಮೇಲಿನ ವಾಕ್ಯಗಳಲ್ಲಿ ಎರಡೂ ವಾಕ್ಯಗಳೂ ಸರಿ. ಆದರೆ,
(ಅ) ಎಂಬ ವಾಕ್ಯದಲ್ಲಿರುವ ಯು ಎಂಬ ಅಕ್ಷರವನ್ನು ಸೇರಿಸಲಾಗಿದೆ.
(ಆ) ಎಂಬ ವಾಕ್ಯದಲ್ಲಿ ‘ಯು’ ಅನ್ನು ಬಿಡಲಾಗಿದೆ. (ಆ) ಎಂಬ ವಾಕ್ಯದಲ್ಲಿ ‘ಯು’
ಅನ್ನು ಬಿಟ್ಟರೂ ಅರ್ಥ ವ್ಯತ್ಯಾಸವಾಗುವುದಿಲ್ಲ ಎಂಬುದನ್ನು ಗಮನಿಸಿ.
(ಕ) ಇರುವೆ ಗೂಡನ್ನು ಬಂದಿತು. (ಗೂಡು + ಅನ್ನು =ಗೂಡನ್ನು)
(ಗ) ಇರುವೆ ಗೂಡಿನಿಂದ ಬಂದಿತು. (ಗೂಡು+ನ+ಇಂದ=ಗೂಡಿನಿಂದ)
(ಚ) ಇರುವೆ ಗೂಡಿಗೆ ಬಂದಿತು. (ಗೂಡು+ಇಗೆ=ಗೂಡಿಗೆ)
(ಜ) ಇರುವೆ ಗೂಡಿನಲ್ಲಿ ಬಂದಿತು. (ಗೂಡು+ನ+ಅಲ್ಲಿ=ಗೂಡಿನಲ್ಲಿ, ಇದನ್ನು ಗೂಡು+ಅಲ್ಲಿ=ಗೂಡಲ್ಲಿ ಎಂದೂ ಬಳಸಬಹುದು)
ಮೇಲಿನ ನಾಲ್ಕು ವಾಕ್ಯಗಳಲ್ಲಿ (ಕ) ಮತ್ತು (ಜ) ವಾಕ್ಯಗಳಲ್ಲಿ ಅರ್ಥ ಸ್ಪಷ್ಟವಾಗುವುದಿಲ್ಲ. ಇಂಥ ವಾಕ್ಯ ಸರಿಯಲ್ಲ. ಈ ವಾಕ್ಯವನ್ನು ಬದಲಾಯಿಸಿ ಬರೆಯೋಣ.
(ಕ) ಇರುವೆ ಗೂಡನ್ನು ನೋಡಿತು.
(ಚ) ಇರುವೆ ಗೂಡಿನಲ್ಲಿ (ಗೂಡಲ್ಲಿ) ಇದೆ.
ಈಗ ಈ ವಾಕ್ಯಗಳು ಅರ್ಥವತ್ತಾಗಿ ಕಾಣಿಸುತ್ತವೆ.
ಮೇಲಿನ ನಾಲ್ಕು ವಾಕ್ಯಗಳಲ್ಲಿ (ಗ) ಮತ್ತು (ಚ) ವಾಕ್ಯಗಳಲ್ಲಿ ಅರ್ಥ ಸ್ಪಷ್ಟವಾಗುತ್ತದೆ. ಆದರೆ ಈ ವಾಕ್ಯಗಳಲ್ಲಿ ಬಳಕೆಯಾಗಿರುವ ಗೆ ಮತ್ತು ಇಂದ ಇವುಗಳನ್ನು ಸೇರಿಸಿರುವುದರಿಂದ ಅರ್ಥ ವ್ಯತ್ಯಾಸವಾಗಿದೆ. ಇರುವೆ ಗೂಡಿನಿಂದ ಬಂದಿತು. (ಹೊರಗೆ ಬಂದಿತು) ಇರುವೆ ಗೂಡಿಗೆ ಬಂದಿತು. (ಒಳಗೆ ಬಂದಿತು) ಎಂಬ ಅರ್ಥವಾಗುತ್ತದೆ.
– ಕೊಟ್ಟೆ ಕಟ್ಟಲು ಕೊಂಬೆಗಳನ್ನು ಬಗ್ಗಿಸುತ್ತವೆ.
– ರಾಜು ಗಿಡವನ್ನು ನೆಟ್ಟನು.
– ಕೆಲಸಗಾರ ಇರುವೆಗಳು ರಾಣಿಗೆ ಆಹಾರ ತಿನ್ನಿಸುತ್ತವೆ.
– ಕಮಲ ಮನೆಗೆ ಹೋದಳು.
– ಚಗಳಿ ಇರುವೆಗಳು ಮರದಲ್ಲಿ ಕೊಟ್ಟೆ ಕಟ್ಟುತ್ತವೆ.
– ಪೂರ್ಣಿಮ ಪೇಟೆಯಲ್ಲಿ ಆಟಿಕೆ ಕೊಂಡಳು.