ಕ್ರಿಯಾಪದಗಳು
ಮುಖ್ಯ ಅಂಶಗಳ ಪರಿವಿಡಿ
Toggleಕ್ರಿಯಾಪದ ಎಂದರೇನು?
ಕರ್ತೃವಿನ ಕಾರ್ಯ ತಿಳಿಸುವ ಪದವೇ ʼಕ್ರಿಯಾಪದʼ. ಕ್ರಿಯಾಪದದ ಮೂಲ ರೂಪವನ್ನು ʼಕ್ರಿಯಾಧಾತುʼ ಎಂದು ಕರೆಯಲಾಗುವುದು.
ಉದಾ: ಅವನು ಓದುತ್ತಿದ್ದಾನೆ.
ಈ ವಾಕ್ಯದಲ್ಲಿ ಓದುತ್ತಿದ್ದಾನೆ – ಕ್ರಿಯಾಪದ
ಓದು – ಕ್ರಿಯಾಧಾತು
ಕ್ರಿಯಾಪದಗಳು ಭಾಷೆಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತವೆ. ಕರ್ತೃವಿನ ಕಾರ್ಯ ತಿಳಿಸುವುದೇ ಕ್ರಿಯಾಪದ. ಅಂದರೆ ಒಂದು ಕ್ರಿಯೆಯ ಪೂರ್ಣ ಅರ್ಥವನ್ನು ಕೊಡುವ ಪದಗಳನ್ನು ‘ಕ್ರಿಯಾಪದ’ ಎಂದು ಕರೆಯಲಾಗುತ್ತದೆ. ಕ್ರಿಯಾಪದವು ಕರ್ತೃವಿನ ಲಿಂಗ ಮತ್ತು ವಚನಗಳಿಗೆ ಅನುಗುಣವಾಗಿ ವರ್ತಿಸುತ್ತದೆ.
ಉದಾ : ಮಾಡುತ್ತಾನೆ, ಮಾಡಿದನು, ಮಾಡುವನು, ಮಾಡಲಿ, ಮಾಡನು – ಈ ಎಲ್ಲಾ ಕ್ರಿಯಾಪದಗಳ ಮೂಲರೂಪ ‘ಮಾಡು’ ಆಗಿದೆ.
ಇಂಥ ಕ್ರಿಯಾಪದದ ಮೂಲರೂಪವನ್ನು ‘ಕ್ರಿಯಾಪ್ರಕೃತಿ’ ಅಥವಾ ‘ಧಾತು’ ಎನ್ನುವರು.
ಕ್ರಿಯಾಪ್ರಕೃತಿ ಅಥವಾ ಧಾತುಗಳ ವಿಧಗಳು:
ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.
1. ಮೂಲಧಾತು (ಸಹಜ)ಗಳು
2. ಸಾಧಿತಧಾತು/ಪ್ರತ್ಯಯಾಂತ ಧಾತುಗಳು
(1) ಮೂಲ ಧಾತುಗಳು:
ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆ “ಮೂಲಧಾತು / ಸಹಜಧಾತು” ಎಂದು ಹೆಸರು.
ಉದಾ: ಹಾಡು, ಆಡು, ಕಲಿ, ತೆಗಳು, ಎಳೆ, ಸೆಳೆ ಮಾಡು, ತಿಳಿ, ಅರಿ, ಸುರಿ, ಅರಸು, ಸೆಳೆ, ಓದು, ಹೋಗು, ಬರು, ನಡೆ, ನೋಡು, ಹುಟ್ಟು, ಅಂಜು, ಸುತ್ತು, ಬಿತ್ತು, ಹೊಗಳು, ತಿನ್ನು, ಓಡು, ಮುಚ್ಚು, ಒಪ್ಪು, ಏರು, ಇಳಿ, ಬೀಳು, ಬರೆ, ತೂಗು, ಮಲಗು, ಏಳು, ನಡೆ, ಈಜು, ಬೆಳಗು ಇತ್ಯಾದಿ..
(2) ಸಾಧಿತ/ಪ್ರತ್ಯಯಾಂತ ಧಾತು:
ಕನ್ನಡದ ಕೆಲವು ನಾಮಪ್ರಕೃತಿಗಳ ಮೇಲೂ ಮತ್ತು ಕೆಲವು ಅನುಕರಣ ಶಬ್ದಗಳ ಹಾಗೂ ಸಂಸ್ಕೃತದ ಕೆಳವು ನಾಮಪ್ರಕೃತಿಗಳ ಮೇಲೂ ʼಇಸುʼ ಎಂಬ ಪ್ರತ್ಯಯ ಸೇರಿದಾಗ ರೂಪಗೊಳ್ಳುವ ಧಾತುಗಳನ್ನು ಪ್ರತ್ಯಯಾಂತ ʼಧಾತು/ಸಾಧಿತʼ ಧಾತುಗಳೆಂದು ಹೆಸರು.
ನಾಮಪ್ರಕೃತಿ | + | ಪ್ರತ್ಯಯ | = | ಸಾಧಿತ ಧಾತು |
---|---|---|---|---|
ಅಬ್ಬರ | + | ಇಸು | = | ಅಬ್ಬರಿಸು |
ಕನ್ನಡ | + | ಇಸು | = | ಕನ್ನಡಿಸು |
ಪ್ರೀತಿ | + | ಇಸು | = | ಪ್ರೀತಿಸು |
ಮುನಿ | + | ಇಸು | = | ಮುನಿಸು |
ಕಾಡು | + | ಇಸು | = | ಕಾಡಿಸು |
ನೋವು | + | ಇಸು | = | ನೋಯಿಸು |
ಸಾವು | + | ಇಸು | = | ಸಾಯಿಸು |
ಬದುಕು | + | ಇಸು | = | ಬದುಕಿಸು |
ಶೋಕ | + | ಇಸು | = | ಶೋಕಿಸು |
ಅನುಕರಣಾ ಶಬ್ದಗಳು ಧಾತುಗಳಾಗುವಿಕೆ | ||||
---|---|---|---|---|
ಧಗ ಧಗ | + | ಇಸು | = | ಧಗಧಗಿಸು |
ಥಳ ಥಳ | + | ಇಸು | = | ಥಳಥಳಿಸು |
ಛಟಪಟ | + | ಇಸು | = | ಛಟಪಟಿಸು |
ಗಮಗಮ | + | ಇಸು | = | ಗಮಗಮಿಸು |
ನಳ ನಳ | + | ಇಸು | = | ನಳನಳಿಸು |
ನಾಮಪ್ರಕೃತಿ | + | ಪ್ರತ್ಯಯ | = | ಸಾಧಿತ ಧಾತು |
---|---|---|---|---|
ರಕ್ಷಾ | + | ಇಸು | = | ರಕ್ಷಿಸು |
ಪ್ರಯತ್ನ | + | ಇಸು | = | ಪ್ರಯತ್ನಿಸು |
ಸಿದ್ದಿ | + | ಇಸು | = | ಸಿದ್ದಿಸು |
ಯತ್ನ | + | ಇಸು | = | ಯತ್ನಿಸು |
ಭಾವ | + | ಇಸು | = | ಭಾವಿಸು |
ಕರುಣೆ | + | ಇಸು | = | ಕರುಣಿಸು |
ದುಃಖ | + | ಇಸು | = | ದುಃಖಿಸು |
ಸುಖ | + | ಇಸು | = | ಸುಖಿಸು |
ಸೇವನೆ | + | ಇಸು | = | ಸೇವಿಸು |
ಸ್ತುತಿ | + | ಇಸು | = | ಸ್ತುತಿಸು |
ಶೋಕ | + | ಇಸು | = | ಶೋಕಿಸು |
ಲೇಪನ | + | ಇಸು | = | ಲೇಪಿಸು |
ಜಪ | + | ಇಸು | = | ಜಪಿಸು |
ಕ್ಷಮಾ | + | ಇಸು | = | ಕ್ಷಮಿಸು |
(3) ಪ್ರೇರಣಾರ್ಥಕ ಎಂದರೆ:
ಇನ್ನೋಬ್ಬರಿಂದ ಕೆಲಸವನ್ನು/ಕಾರ್ಯವನ್ನು ಮಾಡಿಸುವುದು ಎಂದರ್ಥ ಅಥವಾ ಒಬ್ಬರ ಪ್ರೇರಣೆಯಿಂದ ಇನ್ನೋಬ್ಬರು ಕಾರ್ಯ ನಡೆಯುವಂತೆ ಮಾಡುವುದು.
ನಾಮಪ್ರಕೃತಿ | + | ಪ್ರತ್ಯಯ | + | ಸಾಧಿತ ಧಾತು |
---|---|---|---|---|
ಕಲಿ | + | ಇಸು | = | ಕಲಿಸು |
ನಲಿ | + | ಇಸು | = | ನಲಿಸು |
ಮಾಡು | + | ಇಸು | = | ಮಾಡಿಸು |
ನಗು | + | ಇಸು | = | ನಗಿಸು |
ಬರೆ | + | ಇಸು | = | ಬರೆಸು |
ನಡೆ | + | ಇಸು | = | ನಡೆಸು |
ಓಡು | + | ಇಸು | = | ಓಡಿಸು |
ಹಾಡು | + | ಇಸು | = | ಹಾಡಿಸು |
ಕರಗು | + | ಇಸು | = | ಕರಗಿಸು |
(4) ಸಕರ್ಮಕ ಮತ್ತು (5) ಅಕರ್ಮಕ ಧಾತುಗಳು :
ರಾಮನು ಹಣ್ಣನ್ನು ತಿಂದನು. – ಈ ವಾಕ್ಯದಲ್ಲಿ ‘ರಾಮನು’ ಎಂಬುದು ‘ಕರ್ತೃಪದ’, ‘ಹಣ್ಣನ್ನು’ ಎಂಬುದು ‘ಕರ್ಮಪದ’, ‘ತಿಂದನು’ ಎಂಬುದು ‘ಕ್ರಿಯಾಪದ’ ಆಗಿದೆ. ರಾಮನು ಏನನ್ನು ತಿಂದನು? ಎಂದು ಪ್ರಶ್ನಿಸಿದರೆ ‘ಹಣ್ಣನ್ನು’ ಎಂಬ ಉತ್ತರ ಬರುತ್ತದೆ. ಹೀಗೆ ಕ್ರಿಯಾಪದವನ್ನು ಆಧಾರವಾಗಿಟ್ಟುಕೊಂಡು ಏನನ್ನು ಎಂದು ಪ್ರಶ್ನಿಸಿದಾಗ ಕರ್ಮಪದ ಬರಬೇಕು. ಆದರೆ ಕೆಲವು ಕ್ರಿಯಾಪದಗಳು ಕರ್ಮಪದ ಇಲ್ಲದೆ ಬಳಕೆಯಾಗುತ್ತವೆ.
ಉದಾ : ರಾಮನು ಓಡಿದನು. ಇಲ್ಲಿ ರಾಮನು ಏನನ್ನು ಓಡಿದನು ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದಿಲ್ಲ. ಹೀಗಾಗಿ, ಕರ್ಮಪದವನ್ನು ಅಪೇಕ್ಷಿಸುವ ಧಾತುಗಳನ್ನು ‘ಸಕರ್ಮಕ ಧಾತುಗಳು’ ಎಂತಲೂ, ಕರ್ಮಪದವನ್ನು ಅಪೇಕ್ಷಿಸದ ಧಾತುಗಳನ್ನು ‘ಅಕರ್ಮಕ ಧಾತುಗಳು’ ಎಂತಲೂ ಕರೆಯಲಾಗುತ್ತದೆ. ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ.
(4) ಸಕರ್ಮಕ ಧಾತುಗಳು: ರಕ್ಷಿಸು, ಕಟ್ಟು, ಓದು, ಮಾಡು, ಉಣ್ಣು, ಕತ್ತರಿಸು, ತೆರೆ, ಸೇರು, ಬಿಡು
– ಈ ಎಲ್ಲಾ ಧಾತುಗಳ ಮುಂದೆ ‘ಏನನ್ನು’ ? ಯಾರನ್ನು? ಎಂದು ಎಂದು ಪ್ರಶ್ನೆ ಹಾಕಿಕೊಂಡರ ಯಾವುದಾದರೊಂದು (ಕರ್ಮಪದ) ಉತ್ತರ ನಿಗುತ್ತದ.
ನೀನು ಮರವನ್ನು ರಕ್ಕಿಸು. (ಏನನ್ನು? – ಮರವನ್ನು)
ಅವಳು ಮಾಲೆಯನ್ನು ಕಟ್ಟುತ್ತಿದ್ದಾಳೆ. (ಏನನ್ನು? – ಮಾಲೆಯನ್ನು)
ಅವರು ಊಟವನ್ನು ಮಾಡುತ್ತಿದ್ದಾರೆ. (ಏನನ್ನು? – ಊಟವನ್ನು)
ಅವನು ಮಾಂಸಾಹಾರವನ್ನು ಉಣ್ಣುತ್ತಿದ್ದಾನೆ. (ಏನನ್ನು? – ಮಾಂಸಾಹಾರವನ್ನು)
ದ್ರೋಹಿಗಳು ಮರವನ್ನು ಕತ್ತರಿಸುತ್ತಿದ್ದಾರೆ. (ಏನನ್ನು? – ಮರವನ್ನು)
ನೀವು ಬಾಗಿಲನ್ನು ತೆರೆಯಿರಿ. (ಏನನ್ನು? – ಬಾಗಿಲನ್ನು)
ನೀನು ಮನೆಯನ್ನು ಸೇರು. (ಏನನ್ನು? – ಮನೆಯನ್ನು)
ನೀನು ಅವರನ್ನು ಬಿಡು. (ಯಾರನ್ನು? – ಅವರನ್ನು)
(5) ಅಕರ್ಮಕ ಧಾತುಗಳು : ಮಲಗು, ಓಡು, ಹುಟ್ಟು, ಹೋಗು, ಏಳು, ಸೋರು, ನಾಚು – ಈ
ಎಲ್ಲಾ ಧಾತುಗಳ ಮುಂದೆ ‘ಏನನ್ನು’? ಯಾರನ್ನು? ಎಂದು ಪ್ರಶ್ನೆ ಹಾಕಿಕೊಂಡರೆ ಕರ್ಮಪದದ ಅಗತ್ಯ ಇರುವುದಿಲ್ಲ.
ಅವನು ಮಲಗಿದನು. (ಏನನ್ನು? ಉತ್ತರ: ——)
ಅವಳು ಓಡುತ್ತಿದ್ದಾಳೆ. (ಏನನ್ನು? ಉತ್ತರ: ——)
ಮಗು ಹುಟ್ಟಿತು. (ಏನನ್ನು? ಉತ್ತರ: ——)
ರಾಧಾ ಹೋಗುತ್ತಿದ್ದಾಳೆ. (ಏನನ್ನು? ಉತ್ತರ: ——)
ಕೋಡ ಸೋರುತ್ತಿದೆ. (ಏನನ್ನು? ಉತ್ತರ: ——)
ಕ್ರಿಯಾಪದಗಳಲ್ಲಿ ಇನ್ನೂ ಹಲವು ರೂಪಗಳಿವೆ. ಅವುಗಳನ್ನು ಈಗ ತಿಳಿಯೋಣ.
(6) ವಿಧ್ಯರ್ಥಕ (ವಿಧಿ + ಅರ್ಥ) ಕ್ರಿಯಾಪದ :
ಆಶೀರ್ವಾದ, ಅಪ್ಪಣೆ, ಆಜ್ಞೆ, ಹಾರೈಕೆ ಇವುಗಳನ್ನು ತೋರುವಾಗ ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು
ಸೇರಿ ವಿಧ್ಯರ್ಥಕ ಕ್ರಿಯಾಪದಗಳು ಆಗುತ್ತವೆ.
ಉದಾ : ದೇವರು ನಿನಗೆ ಒಳ್ಳೆಯದು ಮಾಡಲಿ.
ಲಕ್ಷ್ಮೀ ಪಾಠವನ್ನು ಗಟ್ಟಿಯಾಗಿ ಓದಲಿ.
ಅವರಿಗೆ ಜಯವಾಗಲಿ.
ಅವನು ಹಾಳಾಗಿ ಹೋಗಲಿ.
(ದಪ್ಪಕ್ಷರಗಳಲ್ಲಿ ಅಡಿಗೆರೆದಿರುವ ಪದಗಳು ವಿಧ್ಯರ್ಥಕ ಕ್ರಿಯಾಪದಗಳು.)
(7) ನಿಷೇಧಾರ್ಥಕ ಕ್ರಿಯಾಪದಗಳು :
ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು
ಸೇರಿದಾಗ ನಿಷೇಧಾರ್ಥಕ ಕ್ರಿಯಾಪದಗಳು ಉಂಟಾಗುತ್ತವೆ.
ಉದಾ : ಅವನು ಅನ್ನವನ್ನು ತಿನ್ನನು.
ಅವರು ಊರಿಂದ ಇಂದು ಬಾರರು.
ಅವಳು ನನ್ನ ಮಾತು ಕೇಳಳು.
(ದಪ್ಪಕ್ಷರಗಳಲ್ಲಿ ಅಡಿಗೆರೆದಿರುವ ಪದಗಳು ನಿಷೇಧಾರ್ಥಕ ಕ್ರಿಯಾಪದಗಳು.)
(8) ಸಂಭಾವನಾರ್ಥಕ ಕ್ರಿಯಾಪದಗಳು :
ಕ್ರಿಯೆಯು ನಡೆಯುವಿಕೆಯಲ್ಲಿ ‘ಸಂಶಯ’ ಅಥವಾ ‘ಊಹೆ’ ತೋರುವಲ್ಲಿ ಧಾತುಗಳ ಮೇಲೆ
ಆಖ್ಯಾತ ಪ್ರತ್ಯಯಗಳು ಸೇರಿದಾಗ ಸಂಭಾವನಾರ್ಥಕ ಕ್ರಿಯಾಪದಗಳೆನಿಸುತ್ತವೆ.
ಉದಾ : ಅವನು ನಾಳೆ ಬಂದಾನು.
ಚಿನ್ನದ ಬೆಲೆ ಮೇಲಕ್ಕೆ ಏರೀತು
ಅನ್ನವನ್ನು ಆತ ತಿಂದಾನು.
ಅವನು ಪರೀಕ್ಷೆಯಲ್ಲಿ ಪಾಸು ಆದಾನು.
(ದಪ್ಪಕ್ಷರಗಳಲ್ಲಿ ಅಡಿಗೆರೆದಿರುವ ಪದಗಳು ಸಂಭಾವನಾರ್ಥಕ ಕ್ರಿಯಾಪದಗಳು.)
ಕರ್ತೃವಿನ ಕ್ರಿಯೆಯನ್ನು ತಿಳಿಸುವ ಪದವನ್ನು ಕ್ರಿಯಾಪದ ಎನ್ನುವರು.
ಕ್ರಿಯಾರ್ಥವನ್ನು ಕೊಡುವುದಾಗಿಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು.