ಲಿಂಗಗಳು

ಮಾತನಾಡುವಾಗ ಕೆಲವು ಶಬ್ದಗಳನ್ನು ಕೇಳಿದಾಗ ನಮ್ಮ ಮನಸ್ಸಿಗೆ ‘ಗಂಡಸು’ ಎಂಬರ್ಥ ಹೊಳೆಯುವುದು. ಕೆಲವು ಶಬ್ದಗಳನ್ನು ಕೇಳಿದಾಗ ಮನಸ್ಸಿಗೆ ‘ಹೆಂಗಸು’ ಎಂಬ ಅರ್ಥ ಹೊಳೆಯುವುದು. ಮತ್ತೆ ಕೆಲವು ಶಬ್ದಗಳನ್ನು ಕೇಳಿದಾಗ ಹೆಂಗಸು ಮತ್ತು ಗಂಡು ಎರಡೂ ಅಲ್ಲದ ಬೇರೆ ಎಂಬ ಅರ್ಥವು ಹೊಳೆಯುವುದು. ಇದನ್ನು ಆಧಾರವಾಗಿರಿಸಿಕೊಂಡು ವ್ಯಾಕರಣದಲ್ಲಿ ಮುಖ್ಯವಾಗಿ ಮೂರು ಬಗೆಯ ಲಿಂಗಗಳನ್ನು ಗುರುತಿಸುತ್ತೇವೆ. ಅವೇ ಪುಲ್ಲಿಂಗಸ್ತ್ರೀಲಿಂಗ, ನಪುಂಸಕಲಿಂಗಗಳು.

ಮುಖ್ಯ ಅಂಶಗಳ ಪರಿವಿಡಿ

1. ಪುಲ್ಲಿಂಗ: ಯಾವ ಶಬ್ದ ಪ್ರಯೋಗ ಮಾಡಿದಾಗ ‘ಗಂಡಸು’ ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ‘ಪುಲ್ಲಿಂಗ’ವೆನಿಸುವುದು.
ಉದಾಹರಣೆಗೆ:- ದೊಡ್ಡವನು, ಮುದುಕ, ಹುಡುಗ, ಅರಸು, ಮಂತ್ರಿ, ಜಟ್ಟಿ, ಶಕ್ತಿವಂತ, ತಂದೆ, ಮಾವ, ಸಹೋದರ, ಅಣ್ಣ, ತಮ್ಮ, ಚಿಕ್ಕಪ್ಪ, ಸಚಿವ, ಮದುಮಗ, ಸಂತ, ದಾಸ, ಕವಿ ಮುಂತಾದವು.

2. ಸ್ತ್ರೀಲಿಂಗ: ಯಾವ ಶಬ್ದ ಪ್ರಯೋಗ ಮಾಡಿದಾಗ ನಮ್ಮ ಭಾವನೆಗೆ ‘ಹೆಂಗಸು’ ಎಂಬ ಅರ್ಥವು ಹೊಳೆದರೆ ಅದು ‘ಸ್ತ್ರೀ’ ಲಿಂಗವೆನಿಸುವುದು. ಉದಾಹರಣೆಗೆ:- ದೊಡ್ಡವಳು, ಮುದುಕಿ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಹೆಂಡತಿ, ತಂಗಿ, ಸಹೋದರಿ, ರಾಣಿ, ತಾಯಿ, ಅಜ್ಜಿ, ವಿದುಷಿ, ಚಲುವೆ, ಒಳ್ಳೆಯವಳು, ಮಗಳು -ಇತ್ಯಾದಿ.

3. ನಪುಂಸಕಲಿಂಗ: ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಗಂಡಸು ಅಥವಾ ಹೆಂಗಸು ಎಂಬ ಅರ್ಥ ಸ್ಪಷ್ಟವಾಗಿ ಮನಸ್ಸಿಗೆ ಹೊಳೆಯುವುದಿಲ್ಲವೋ ಅದು ನಪುಂಸಕಲಿಂಗ ಎನಿಸುವುದು. ಕನ್ನಡದಲ್ಲಿ ಎಲ್ಲಾ ಪ್ರಾಣಿಗಳನ್ನು ನಪುಂಸಕಲಿಂಗಗಳೆಂದೇ ಪರಿಗಣಿಸಲಾಗುವುದು.
ಉದಾಹರಣೆಗೆ:- ಮನೆ, ನೆಲ, ಬೆಂಕಿ, ಗದ್ದೆ, ಕತ್ತೆ, ಕೋಣ, ಎತ್ತು, ನರಿ, ನಾಯಿ, ಕಟ್ಟಿಗೆ, ಕಲ್ಲು, ಇಟ್ಟಿಗೆ, ಮಳೆ, ಮೋಡ, ಜಲ, ಹೊಳೆ, ಹಳ್ಳ, ಪುಸ್ತಕ – ಇತ್ಯಾದಿಗಳು.
ಗಮನಿಸಿ: ಎಲ್ಲಾ ಪ್ರಾಣಿಗಳು (ಹೆಣ್ಣಿರಲಿ, ಗಂಡಿರಲಿ) ಕನ್ನಡ ವ್ಯಾಕರಣದಲ್ಲಿ ನಪುಂಸಕಲಿಂಗಗಳೇ ಆಗುತ್ತವೆ.
ಕೋಣ _ ಎಮ್ಮೆ
ಹುಂಜ _ ಕೋಳಿ
ಗಂಡು ಹಂದಿ _ ಹೆಣ್ಣು ಹಂದಿ
ಎತ್ತು – ಹಸು

ಅನ್ಯಲಿಂಗದ ವಿಧಗಳು

4. ಪುನ್ನಪುಂಸಕ ಲಿಂಗಗಳು:
5. ಸ್ತ್ರೀನಪುಂಸಕ ಲಿಂಗಗಳು:
6. ನಿತ್ಯ ನಪುಂಸಕ ಲಿಂಗಗಳು
7. ವಾಚ್ಯ ಲಿಂಗಗಳು (ವಿಶೇಷ್ಯಾಧಿನಲಿಂಗಗಳು)

4. ಪುನ್ನಪುಂಸಕ ಲಿಂಗಗಳು:
ಎಲ್ಲಾ ಗ್ರಹವಾಚಕ (ಗ್ರಹವಾಚಿ) ಶಬ್ದಗಳನ್ನು ಪುಲ್ಲಿಂಗದಂತೆಯೂ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ. ಆದ್ದರಿಂದ ಇವನ್ನು ಪುನ್ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.”
ಉದಾ: ಸೂರ್ಯ, ಶನಿ, ಮಂಗಳ, ಚಂದ್ರ, ಗುರು ಇತ್ಯಾದಿ..
ಚಂದ್ರ ಮೂಡಿತು. – ನಪುಂಸಕ ಲಿಂಗ
ಚಂದ್ರ ಮೂಡಿದನು – ಪುಲ್ಲಿಂಗ
ಶನಿಯು ಕಾಡುತ್ತದೆ. – ನಪುಂಸಕ ಲಿಂಗ
ಶನಿಯು ಕಾಡುತ್ತಾನೆ. – ಪುಲ್ಲಿಂಗ
ಸೂರ್ಯ ಉದಯವಾಯಿತು. – ನಪುಂಸಕ ಲಿಂಗ
ಸೂರ್ಯ ಉದಯಿಸಿದನು. – ಪುಲ್ಲಿಂಗ

ಈ ಮೇಲಿನ ವಾಕ್ಯಗಳಲ್ಲಿ ಚಂದ್ರ, ಸೂರ್ಯ, ಶನಿ ಶಬ್ದಗಳು ಪುಲ್ಲಿಂಗ ಹಾಗೂ ನಪುಂಸಕಲಿಂಗಗಳಲ್ಲಿ ಬಳಕೆಯಾಗಿರುವುದು ಕಾಣಬಹುದು.

5. ಸ್ತ್ರೀನಪುಂಸಕ ಲಿಂಗಗಳು:
ನಾಮಪದಗಳು ಸಂಧರ್ಭಕ್ಕನುಗುಣವಾಗಿ ಸ್ತ್ರೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ. ಆದುದರಿಂದ ಇದಕ್ಕೆ ಸ್ತ್ರೀನಪುಂಸಕ ಲಿಂಗಗಳೆಂದು ಕರೆಯುತ್ತೇವೆ.” ಸ್ತ್ರೀ ದೇವರುಗಳ ಹೆಸರುಗಳನ್ನು ಉದಾಯೊಂದಿಗೆ ಕಾಣಬಹುದು.
ಉದಾ: ದೇವತೆ, ಲಕ್ಷ್ಮೀ, ಸರಸ್ವತಿ, ಶಾರದೆ
ಲಕ್ಷ್ಮೀ ಒಲಿದಳು. – ಸ್ತ್ರೀ ಲಿಂಗ
ಲಕ್ಷ್ಮೀ ಒಲಿಯಿತು. – ನಪುಂಸಕ ಲಿಂಗ
ದೇವತೆ ಒಲಿದಳು. – ಸ್ತ್ರೀಲಿಂಗ
ದೇವತೆ ಒಲಿಯಿತು. – ನಪುಂಸಕ
ಸರಸ್ವತಿ ಕೃಪೆ ಮಾಡಿದಳು. – ಸ್ತ್ರೀಲಿಂಗ
ಸರಸ್ವತಿ ಕೃಪೆ ಮಾಡಿತು. – ನಪುಂಸಕ ಲಿಂಗ
ಹುಡುಗಿ ಓದುತ್ತದೆ. – ನಪುಂಸಕ
ಹುಡುಗಿ ಓದುವಳು. – ಸ್ತ್ರೀಲಿಂಗ

6. ನಿತ್ಯ ನಪುಂಸಕ ಲಿಂಗಗಳು :
ಶಿಶು, ಮಗು, ಕೂಸು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ.
ಈ ರೀತಿ ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಉಪಯೋಗಿಸುವುದರಿಂದ ಈ ರೀತಿಯ ಪದಗಳನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.
ಉದಾ:
ಶಿಶು ಜನಿಸಿತು.
ಮಗು ಮಲಗುತ್ತಿದೆ.
ಕೂಸು ಅಳುತ್ತಿದೆ.
ದಂಡು ಬಂತು.
ಜನ ಬಂದರು.

ಈ ಮೇಲೆ ನೀಡಿರುವ ಉದಾಹರಣೆಗಳಲ್ಲಿ ಶಿಶು, ಮಗು, ಕೂಸು, ದಂಡು, ಜನ ಇವು ಗಂಡಾದರೂ ಆಗಿರಬಹುದು ಅಥವಾ ಹೆಣ್ಣಾದರೂ ಆಗಿರಬಹುದು. ಈ ರೀತಿಯಾಗಿದ್ದಾಗ ಪ್ರಯೋಗದಲ್ಲಿ ಮಾತ್ರ ನಪುಂಸಕ ಲಿಂಗದಂತೆ ಬಳಸಬೇಕು. ಇಂತಹ ಪದಗಳನ್ನು ನಿತ್ಯನಪುಂಸಕಲಿಂಗವೆಂದು ಕರೆಯುತ್ತೇವೆ.

7. ವಾಚ್ಯ ಲಿಂಗಗಳು (ವಿಶೇಷ್ಯಾಧಿನಲಿಂಗಗಳು) : ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಮೂರರಲ್ಲೂ ಪ್ರಯೋಗವಾಗುವ ಶಬ್ದಗಳೇ ವಾಚ್ಯಲಿಂಗ ಅಥವಾ ವಿಶೇಷ್ಯಾಧೀನ ಲಿಂಗಗಳು.
ನಾನು, ನೀನು, ತಾನು ಎಂಬ ಸರ್ವನಾಮಗಳು. ಒಳ್ಳೆಯ, ಕೆಟ್ಟ, ದೊಡ್ಡ, ಚಿಕ್ಕ ಮೊದಲಾದ ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯಲಿಂಗ ಅಥವಾ ವಿಶೇಷ್ಯಾಧೀನಲಿಂಗ ಎಂದು ಕರೆಯುತ್ತಾರೆ.”
ಉದಾ: ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗದಲ್ಲಿ ಉದಾಹರಣೆಯೊಂದಿಗೆ ಪ್ರಯೋಗಿಸಿ ತಿಳಿಯೋಣ.

ʼನಾನುʼ ಎಂಬುದಕ್ಕೆ:
ನಾನು ಚಿಕ್ಕವನು – (ಪುಲ್ಲಿಂಗ)
ನಾನು ಚಿಕ್ಕವಳು – (ಸ್ತ್ರೀಲಿಂಗ)
ನಾನು ಚಿಕ್ಕದು – (ನಪುಂಸಕ ಲಿಂಗ)

ʼನೀನುʼ ಎಂಬುದಕ್ಕೆ:
ನೀನು ಗಂಡಸು – (ಪುಲ್ಲಿಂಗ)
ನೀನು ಹೆಂಗಸು – (ಸ್ತ್ರೀಲಿಂಗ)
ನೀನು ಮರ – (ನಪುಂಸಕ ಲಿಂಗ)

ʼತಾನುʼ ಎಂಬುದಕ್ಕೆ:
ತಾನು ಚಿಕ್ಕವನೆಂದು ತಿಳಿದನು. – (ಪುಲ್ಲಿಂಗ)
ತಾನು ಚಿಕ್ಕವಳೆಂದು ತಿಳಿದಳು. – (ಸ್ತ್ರೀಲಿಂಗ)
ತಾನು ಚಿಕ್ಕದೆಂದು ತಿಳಿಯಿತು. – (ನಪುಂಸಕ ಲಿಂಗ)

ʼಒಳ್ಳೆಯʼ ಎಂಬುದಕ್ಕೆ:
ಒಳ್ಳೆಯ ಗಂಡಸು– (ಪುಲ್ಲಿಂಗ)
ಒಳ್ಳೆಯ ಹೆಂಗಸು – (ಸ್ತ್ರೀಲಿಂಗ)
ಒಳ್ಳೆಯ ಜನ – (ನಪುಂಸಕ ಲಿಂಗ)

ʼದೊಡ್ಡʼ ಎಂಬುದಕ್ಕೆ:
ದೊಡ್ಡವನು – (ಪುಲ್ಲಿಂಗ)
ದೊಡ್ಡವಳು – (ಸ್ತ್ರೀಲಿಂಗ)
ದೊಡ್ಡದು – (ನಪುಂಸಕ ಲಿಂಗ)

 

ಗುಣವಾಚಕ ಶಬ್ದಗಳ ಮೇಲೆ ಲಿಂಗಗಳ ಪ್ರಯೋಗ

ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗ
ಒಳ್ಳೆಯವನು ಒಳ್ಳೆಯವಳು ಒಳ್ಳೆಯದು
ಚಿಕ್ಕವನು ಚಿಕ್ಕವಳು ಚಿಕ್ಕದು
ದೊಡ್ಡವನು ದೊಡ್ಡವಳು ದೊಡ್ಡದು
ಹಳಬನು ಹಳಬಳು ಹಳೆಯದು
ಉದಾ: ನೀನು ಒಳ್ಳೆಯವನು – (ಪುಲ್ಲಿಂಗ) ನೀನು ಒಳ್ಳೆಯವಳು – (ಸ್ತ್ರೀಲಿಂಗ) ನೀನು ಒಳ್ಳೆಯದು – (ನಪುಂಸಕ ಲಿಂಗ)
ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗ
ಅವನು ಅವಳು ಅದು
ಇವನು ಇವಳು ಇದು
ನಾನು ನಾನು ನಾನು
ನೀನು ನೀನು ನೀನು
ಯಾವನು ಯಾವಳು ಯಾವುದು