ಸಂಧಿಗಳು

ಸಂಧಿ ಎಂದರೇನು?

ಎರಡು ವರ್ಣಗಳು (ಅಕ್ಷರಗಳು) ಕಾಲವಿಳಂಬವಿಲ್ಲದಂತೆ ಅರ್ಥ ಕೆಡದಂತೆ ಸೇರುವುದೇ ಸಂಧಿ.
ಅ. ಸ್ವರದ ಮುಂದೆ ಸ್ವರ ಬಂದು ಹೀಗೆ ಸಂಧಿಯಾದರೆ ಸ್ವರಸಂಧಿ ಎನ್ನುತ್ತೇವೆ.
ಆ. ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಅಥವಾ ವ್ಯಂಜನದ ಮುಂದೆ ವ್ಯಂಜನ ಇದ್ದು ಸಂಧಿಯಾದರೆ ಅದು ವ್ಯಂಜನ ಸಂಧಿ ಎನ್ನುತ್ತೇವೆ.
ಇ. ಸಂಧಿಯಾಗುವಾಗ ಹಲಕೆಲವು ವ್ಯತ್ಯಾಸಗಳು ಆ ಸಂಧಿಸಿದ ಅಕ್ಷರಗಳಲ್ಲಿ ಉಂಟಾಗುವುತ್ತವೆ. ಈ ವ್ಯತ್ಯಾಸವನ್ನೇ ಸಂಧಿಕ್ರಿಯೆ/ಸಂಧಿಕಾರ್ಯಗಳು ಎನ್ನುತ್ತೇವೆ.

ಪದ ರಚನೆ ಆಗುವಾಗ ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಒಟ್ಟು ಸೇರುವುದೇ ಸಂಧಿ. ಈ ರೀತಿಯಲ್ಲಿ ಪದಗಳು ಒಟ್ಟು ಸೇರುವಾಗ ಮೂಲ ಪದಗಳ ಅರ್ಥಕ್ಕೆ ಯಾವ ಲೋಪವೂ ಬರಬಾರದು, ಅರ್ಥಕ್ಕೆ ಲೋಪ ಬರುವುದಾದಲ್ಲಿ ಸಂಧಿ ಮಾಡಬಾರದೆಂಬ ನಿಯಮವುಂಟು.

ಭಾಷೆಯ ಅನುಸಾರ ಈ ಸಂಧಿಗಳಲ್ಲಿ ‘ಕನ್ನಡ ಸಂಧಿ’ ಮತ್ತು ‘ಸಂಸ್ಕೃತ ಸಂಧಿ’ ಗಳೆಂದು ಎರಡು ವಿಧಗಳಿವೆ.
(I) ಕನ್ನಡ ಪದಗಳೇ ಸೇರಿ ಅಥವಾ ಕನ್ನಡ ಮತ್ತು ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ಕನ್ನಡಸಂಧಿ’ ಎಂತಲೂ,
(II) ಕೇವಲ ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ಸಂಸ್ಕೃತಸಂಧಿ’ ಎಂತಲೂ ಕರೆಯಲಾಗುತ್ತದೆ.

ಈಗ ಕನ್ನಡ ಸಂಧಿಯನ್ನು ನೋಡೋಣ.

ಕನ್ನಡ ಸಂಧಿಗಳು

ಕನ್ನಡ ಸಂಧಿಗಳನ್ನು ಅಕ್ಷರಗಳ ಆಧಾರದ ಮೇಲೆ ಪುನಃ ಎರಡು ಭಾಗಗಳಾಗಿ ವಿಂಗಡಿಸಬಹುದು.

1. ಸ್ವರ ಸಂಧಿಗಳು

(1) ಲೋಪಸಂಧಿ
(2) ಆಗಮಸಂಧಿ

2. ವ್ಯಂಜನ ಸಂಧಿಗಳು

(3) ಆದೇಶ ಸಂಧಿ

ಊರಲ್ಲಿ, ಮೊಟ್ಟೆಯಿಡು, ಬೆಟ್ಟದಾವರೆ ಮೊದಲಾದ ಪದಗಳನ್ನು ಊರು, ಅಲ್ಲಿ, ಮೊಟ್ಟೆ, ಇಡು, ಬೆಟ್ಟ, ತಾವರೆ ಎಂದು ಓದಬಹುದಾದರೂ ನಾವು ಮಾತನಾಡುವಾಗ ಸುಲಭವಾಗಲು ಈ ಪದಗಳನ್ನು ಕೂಡಿಸಿ ಊರಲ್ಲಿ, ಮೊಟ್ಟೆಯಿಡು, ಬೆಟ್ಟದಾವರೆ ಇತ್ಯಾದಿಯಾಗಿ ಓದುತ್ತೇವೆ.
ಹೀಗೆ ಪದಗಳನ್ನು ಎಡೆಬಿಡದೆ ಒಟ್ಟಿಗೆ ಕೂಡಿಸಿ ಓದುವುದಕ್ಕೆ ಅಥವಾ ಹೇಳುವುದಕ್ಕೆ ‘ಸಂಧಿ’ ಎಂದು ಹೆಸರು.

ಈ ಪದಗಳನ್ನು ಸೇರಿಸಿ ಹೇಳುವಾಗ ಆ ಪದಗಳಲ್ಲಿ ಇರುವ ಅಕ್ಷರಗಳಲ್ಲಿ ಒಂದು ಅಕ್ಷರ ಬಿಟ್ಟುಹೋಗಬಹುದು (ಉದಾಹರಣೆ ಗಮನಿಸಿ), ಇಲ್ಲವೇ ಇರುವ ಅಕ್ಷರಗಳ ಜೊತೆಗೆ ಒಂದು ಅಕ್ಷರ ಹೊಸದಾಗಿ ಸೇರಿಕೊಳ್ಳಬಹುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬರಬಹುದು. ಹೀಗೆ ಸಂಧಿಯಾಗುವಾಗ ಅಕ್ಷರಗಳು ಲೋಪವಾಗುವುದು, ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ‘ಸಂಧಿಕಾರ್ಯ’ ಎನ್ನುವರು.

(1) ಲೋಪಸಂಧಿ:

ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ‘ಲೋಪಸಂಧಿ’ ಎನ್ನುವರು. ಉದಾ:
ಊರು+ಅಲ್ಲಿ – ಊರಲ್ಲಿ
ಊರು + ಊರು = ಊರುರು
ಬಲ್ಲೆನು + ಎಂದು = ಬಲ್ಲೆನೆಂದು
ಊರು + ಇಂದ = ಊರಿಂದ
ಮಾತು + ಇಲ್ಲ = ಮಾತಿಲ್ಲ
ಮಾತು + ಅಂತು = ಮಾತಂತು
ಬೇರೆ + ಒಬ್ಬ = ಬೇರೊಬ್ಬ
ನಿನಗೆ + ಅಲ್ಲದೆ = ನಿನಗಲ್ಲದೆ
ತುಪ್ಪಳದ + ಅಂತೆ = ತುಪ್ಪಳದಂತೆ ಅ ಕಾರ ಲೋಪ
ಅಲ್ಲಿ + ಇದ್ದೇನೆ = ಅಲ್ಲಿದ್ದೇನೆ ಇ ಕಾರ ಲೋಪ
ಇವನು + ಒಬ್ಬ = ಇವನೊಬ್ಬ ಉ ಕಾರ ಲೋಪ
ಬೆಳ್ಳಗೆ + ಆಗಿ = ಬೆಳ್ಳಗಾಗಿ ಎ ಕಾರ ಲೋಪ
ಬೇರೆ + ಒಬ್ಬ = ಬೇರೊಬ್ಬ (ಎ ಕಾರ ಲೋಪ)
ಮತ್ತು + ಒಬ್ಬ = ಮತ್ತೊಬ್ಬ (ಉ + ಒ = ಒ)
ಅಲ್ಲಿ + ಅಲ್ಲಿ = ಅಲ್ಲಲ್ಲಿ (ಇ ಕಾರ ಲೋಪ)
ಸಂಪನ್ನರು + ಆದ = ಸಂಪನ್ನರಾದ
ಇನ್ನೂ + ಒಂದು = ಇನ್ನೊಂದು (ಊ + ಒ = ಒ)
ಒಂದನ್ನೂ + ಒಂದು = ಒಂದನ್ನೊಂದು (ಊ + ಒ = ಒ)
ತನ್ನ + ಇಚ್ಛೆ = ತನ್ನಿಚ್ಛೆ (ಅ + ಇ = ಇ)
ಬಟ್ಟಲು + ಆಕಾರ = ಬಟ್ಟಲಾಕಾರ (ಉ + ಆ = ಆ)
ಒಂದು + ಎರಡು = ಒಂದೆರಡು (ಉ + ಎ = ಎ)
ನಾಲ್ಕು + ಐದು = ನಾಲ್ಕೈದು (ಉ + ಐ = ಐ)
ಮೇಲೆ + ಏರಿ = ಮೇಲೇರಿ (ಎ + ಏ = ಏ)
ಕೊಳು + ಊದಿ = ಕೊಳಲೂದಿ (ಉ + ಊ = ಊ)

(2) ಆಗಮಸಂಧಿ:

ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ʼಆಗಮ ಸಂಧಿʼ ಎನ್ನುವರು.
ಉದಾ: ಮೊಟ್ಟೆ+ಇಡು-ಮೊಟ್ಟೆಯಿಡು
ಕೈ + ಅನ್ನು = ಕೈಯನ್ನು
ಗುರು + ಅನ್ನು = ಗುರುವನ್ನು
ಹಸು + ಅನ್ನು = ಹಸುವನ್ನು
ಮರ + ಅನ್ನು = ಮರವನ್ನು
ಪುಸ್ತಕ + ಅನ್ನು = ಪುಸ್ತಕವನ್ನು
ಪಿತೃ + ಅನ್ನು = ಪಿತೃವನ್ನು
ಕೈ + ಅಲ್ಲಿ = ಕೈಯಲ್ಲಿ
ಚಳಿ + ಇಂದ = ಚಳಿಯಿಂದ
ಮನೆ + ಇಂದ = ಮನೆಯಿಂದ
ಮಳೆ + ಇಂದ = ಮಳೆಯಿಂದ
ಶಾಲೆ + ಇಂದ = ಶಾಲೆಯಿಂದ
ಶಾಲೆ + ಅಲ್ಲಿ = ಶಾಲೆಯಲ್ಲಿ
ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ
ಭಾವನೆ + ಉಂಟಾಯಿತು = ಭಾವನೆಯುಂಟಾಯಿತು
ಸ್ವಾರಸ್ಯ + ಇಲ್ಲ = ಸ್ವಾರಸ್ಯವಿಲ್ಲ
ಮಗು + ಇಗೆ = ಮಗುವಿಗೆ
ಧೈರ್ಯ + ಆಗಿ = ಧೈರ್ಯವಾಗಿ

(3) ಆದೇಶಸಂಧಿ:

ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದನ್ನು ‘ಆದೇಶ ಸಂಧಿ’ ಎನ್ನುವರು. ಉದಾ: ಬೆಟ್ಟ + ತಾವರೆ = ಬೆಟ್ಟದಾವರೆ
ʼಕ ತ ಪʼ ಗಳಿಗೆ ʼಗ ದ ಬʼ ಗಳೂ ಕೆಲವೊಮ್ಮೆ ʼಪ ಬ ಮʼ ಗಳ ಬದಲಿಗೆ ʼವʼ ಕಾರವೂ ಆದೇಶವಾಗಿ ಬರುತ್ತವೆ.
ಉದಾ : ಹುಲ್ಲು + ಕಾವಲು > ಹುಲ್ಲುಗಾವಲು
ಬೆನ್ + ಪತ್ತು = ಬೆಂಬತ್ತು
ಮೈ + ತೊಳೆ = ಮೈದೊಳೆ
ಮೈ + ತೋರು = ಮೈದೋರು
ಕೆನೆ + ಪಾಲ್ = ಕೆನೆವಾಲ್
ಮಳೆ + ಕಾಲ = ಮಳೆಗಾಲ
ಬೆಟ್ಟ + ತಾವರೆ = ಬೆಟ್ಟದಾವರೆ
ಹೂ + ಪುಟ್ಟಿ = ಹೂಬುಟ್ಟಿ
ತುದಿ + ಕಾಲಲ್ಲಿ = ತುದಿಗಾಲಲ್ಲಿ
ಹುಲಿ + ತೊಗಲು = ಹುಲಿದೊಗಲು
ಕಣ್‌ + ಪನಿ = ಕಂಬನಿ
ನೀರ್‌ + ಪನಿ = ನೀರ್ವನಿ
ಕಡು + ಬೆಳ್ಪು = ಕಡುವೆಳ್ಪು
ಮೆಲ್‌ + ಮಾತು = ಮೆಲ್ವಾತು
ತಲೆ + ಕೂದಲು = ತಲೆಗೂದಲು
ಕೆಳ + ತುಟಿ = ಕೆಳದುಟಿ
ಆಶ್ರಯ + ತಾಣ = ಆಶ್ರಯದಾಣ

ಪ್ರಕೃತಿಭಾವ 

ಆ + ಆಡು ಅಯ್ಯೋ + ಇದೇನು
ಓಹೋ + ಅಜ್ಜಿ ಬಂದರೇ ಅಕ್ಕಾ + ಇತ್ತಬಾ
ಕೊಟ್ಟಿರುವ ಉದಾಹರಣೆಗಳನ್ನು ಗಮನಿಸಿದಾಗ ಸ್ವರದ ಮುಂದೆ ಸ್ವರ ಬಂದಿರುವುದರಿಂದ ಲೋಪ ಅಥವಾ ಆಗಮ ಸಂಧಿ ಆಗಬೇಕಿತ್ತು. ಹಾಗೆ ಸಂಧಿ ಮಾಡಿದರೆ ಅರ್ಥ ಕೆಡುತ್ತದೆ. ಹಾಗಾಗಿ ಸಂಧಿ ಮಾಡುವುದಿಲ್ಲ. ಪ್ಲುತ ಸ್ವರದ ಮುಂದೆ ಸ್ವರ ಬಂದಾಗ; ಅಯ್ಯೋ, ಆಹಾ, ಓಹೋ ಮುಂತಾದ ಭಾವಸೂಚಕ ಅವ್ಯಯಗಳ ಮುಂದೆ ಸ್ವರ ಬಂದಾಗ ಹಾಗೂ ಆ ಎಂಬ ಪದದ ಮುಂದೆ (ಅಕ್ಷರದ ಮುಂದೆ ಅಲ್ಲ) ಸ್ವರ ಬಂದಾಗ ಸಂಧಿ ಮಾಡಬಾರದು. ಹೀಗೆ – ಸ್ವರದ
ಮುಂದೆ ಸ್ವರ ಬಂದರೂ ಸಂಧಿಯಾಗದೆ ಇದ್ದ ಹಾಗೆಯೇ ಇರುವುದು ಪ್ರಕೃತಿಭಾವ

ಸಂಸ್ಕೃತ ಸಂಧಿಗಳು

ಸಂಸ್ಕೃತ ಸಂಧಿಗಳನ್ನು ಅಕ್ಷರಗಳ ಆಧಾರದ ಮೇಲೆ ಪುನಃ ಎರಡು ಭಾಗಗಳಾಗಿ ವಿಂಗಡಿಸಬಹುದು.

1. ಸ್ವರ ಸಂಧಿಗಳು

(1) ಸವರ್ಣ ದೀರ್ಘ ಸಂಧಿಗಳು:
(2) ಗುಣಸಂಧಿ
(3) ವೃದ್ಧಿಸಂಧಿ
(4) ಯಣ್ ಸಂಧಿ

2. ವ್ಯಂಜನ ಸಂಧಿಗಳು

​(5) ಜಶ್ತ್ವಸಂಧಿ
​(6) ಶ್ಚುತ್ವಸಂಧಿ
(7) ಷ್ಟುತ್ವ ಸಂಧಿ
(8) ಛತ್ವ ಸಂಧಿ
(9) ‘ಲ’ ಕಾರ ದ್ವಿತ್ವ ಸಂಧಿ
(10) ಅನುನಾಸಿಕಸಂಧಿ

(1) ಸವರ್ಣ ದೀರ್ಘ ಸಂಧಿಗಳು:

ಒಂದೇ ಜಾತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘರೂಪ ಪಡೆಯುವುದು ಸವರ್ಣದೀರ್ಘ ಸಂಧಿ.
ಸವರ್ಣಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿಯಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘಸಂಧಿ ಎಂದು ಕರೆಯುವರು.
(ಉದಾ: ಪೂರ್ವಪದದ ಕೊನೆಯ ‘ಅ’ ಹಾಗೂ ಉತ್ತರ ಪದದ ಮೊದಲಿನ ‘ಅ’ ಸೇರಿ ‘ಆ’ ಆಗುವುದು. ಅಂತೆಯೇ ಇ + ಇ = ಈ, ಉ + ಉ = ಊ ಆಗುತ್ತವೆ)
ಸೂಚನೆ: ಪೂರ್ವಪದದ ಕೊನೆಯ ಅಕ್ಷರ ದೀರ್ಘವಾಗಿದ್ದರೆ ಅಡ್ಡಿಯೇನಿಲ್ಲ. ಅಂತೆಯೇ ಉತ್ತರ ಪದದ ಮೊದಲ ಅಕ್ಷರ ದೀರ್ಘವಾಗಿರಲೂಬಹುದು.
ಉದಾ:
ದೇವ + ಆಲಯ = ದೇವಾಲಯ (ಅ + ಆ = ಆ)
ದೇವ + ಅಸುರ = ದೇವಾಸುರ (ಅ + ಅ = ಆ)
ಮಹಾ + ಆಸನ = ಮಹಾಸನ
ಮಹಾ + ಆತ್ಮ = ಮಹಾತ್ಮ (ಆ + ಆ = ಆ)
ಮಹಾ + ಅನುಭಾವ = ಮಹಾನುಭಾವ (ಆ + ಅ = ಆ)
ಅತಿ + ಇಂದ್ರ = ಅತೀಂದ್ರ
ರವಿ + ಇಂದ್ರ = ರವೀಂದ್ರ (ಇ + ಇ = ಈ)
ಗಿರಿ + ಇಂದ್ರ = ಗಿರೀಂದ್ರ (ಇ + ಇ = ಈ)
ಗಿರಿ + ಈಶ = ಗಿರೀಶ (ಇ + ಈ = ಈ)
ಗುರು + ಉಪದೇಶ = ಗುರೂಪದೇಶ (ಉ + ಉ = ಊ)
ವಿದ್ಯಾ + ಅಭ್ಯಾಸ = ವಿದ್ಯಾಭ್ಯಾಸ (ಆ + ಅ = ಆ)
ಸರ + ಅಸುರ = ಸುರಾಸುರ
ವಧೂ + ಉಪೇತ = ವಧೂಪೇತ
ಪಂಚ + ಅಕ್ಷರಿ = ಪಂಚಾಕ್ಷರಿ
ಸುವರ್ಣ + ಅಕ್ಷರ = ಸುವರ್ಣಾಕ್ಷರ
ತತ್ವ + ಅನುಯಾಯಿ = ತತ್ವಾನುಯಾಯಿ
ರುದ್ರ + ಅಕ್ಷಿ = ರುದ್ರಾಕ್ಷಿ
ವಂಶ + ಅಭಿವೃದ್ಧಿ = ವಂಶಾಭಿವೃದ್ಧಿ
ಸಂತಾನ + ಅಭಿವೃದ್ಧಿ = ಸಂತಾನಾಭಿವೃದ್ಧಿ
ಹಿಮ + ಆಲಯ = ಹಿಮಾಲಯ
ವಿದ್ಯಾ + ಅರ್ಥಿ = ವಿದ್ಯಾರ್ಥಿ (ಆ + ಅ = ಆ)
ಸಚಿವ + ಆಲಯ = ಸಚಿವಾಲಯ
ಶಸ್ತ್ರ + ಅಸ್ತ್ರ = ಶಸ್ತ್ರಾಸ್ತ್ರ (ಅ + ಅ = ಆ)

(2) ಗುಣಸಂಧಿ:

ಪೂರ್ವಪದದ ಅಂತ್ಯದಲ್ಲಿ ‘ಅ’ ಅಥವಾ ‘ಆ’ ಸ್ವರಗಳಿದ್ದು, ಅವುಗಳಿಗೆ ‘ಇ’ ಅಥವಾ ‘ಈ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ ಸ್ವರವು, ‘ಉ’ ಅಥವಾ ‘ಊ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಓ’ ಸ್ವರವು, ಅದೇ ರೀತಿ ‘ಋ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಅರ್’ ಆದೇಶವಾಗಿ ಬರುವುದನ್ನು ‘ಗುಣ ಸಂಧಿ’ ಎಂದು ಕರೆಯಲಾಗುತ್ತದೆ.
ಉದಾ :
ಸುರ + ಇಂದ್ರ = ಸುರೇಂದ್ರ (ಅ + ಇ = ಏ)
ದೇವ + ಈಶ = ದೇವೇಶ (ಅ + ಈ = ಏ)
ದೇವ + ಇಂದ್ರ = ದೇವೇಂದ್ರ (ಅ + ಇ = ಏ)
ಮಹಾ + ಇಂದ್ರ = ಮಹೇಂದ್ರ ( ಆ + ಇ = ಏ)
ಮಹಾ + ಈಶ = ಮಹೇಶ (ಆ + ಈ = ಏ)
ಜ್ಞಾನ + ಈಶ್ವರ = ಜ್ಞಾನೇಶ್ವರ (ಅ + ಈ = ಏ)
ಮಹಾ + ಉತ್ಸವ = ಮಹೋತ್ಸವ (ಆ + ಉ = ಓ)
ಮಹಾ + ಉರ್ಜಿತ = ಮಹೋರ್ಜಿತ (ಆ + ಉ = ಓ)
ಮಹಾ + ಉದಯ = ಮಹೋದಯ (ಆ + ಉ =ಓ)
ಅರುಣ + ಉದಯ = ಅರುಣೋದಯ (ಅ +ಉ = ಓ)
ಸೂರ್ಯ + ಉದಯ = ಸೂರ್ಯೋದಯ ( ಅ + ಉ = ಓ)
ಚಂದ್ರ + ಉದಯ = ಚಂದ್ರೋದಯ (ಅ + ಉ = ಓ)
ಮಹಾ + ಋಷಿ = ಮಹರ್ಷಿ (ಆ + ಋ = ಅರ್)
ದೇವ + ಋಷಿ = ದೇವರ್ಷಿ (ಅ + ಋ = ಅರ್‌)
ವೀರ + ಈಶ = ವೀರೇಶ (ಅ + ಈ = ಏ)
ರಾಜ + ಋಷಿ = ರಾಜರ್ಷಿ (ಅ + ಋ = ಅರ್‌)
ಸಂತಾನ + ಉತ್ಪತ್ತಿ = ಸಂತಾನೋತ್ಪತ್ತಿ (ಅ + ಉ = ಓ)
ರಾಜ್ಯ + ಉತ್ಸವ = ರಾಜ್ಯೋತ್ಸವ
ಪೂರ್ವ + ಉತ್ತರ = ಪೂರ್ವೋತ್ತರ
ಜೀವನ + ಉತ್ಸಾಹ = ಜೀವನೋತ್ಸಾಹ

(3) ವೃದ್ಧಿಸಂಧಿ:

ಅ ಆ ಕಾರಗಳ ಮುಂದೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವು ಆದೇಶಗಳಾಗಿ ಬಂದರೆ ಅದಕ್ಕೆ ವೃದ್ಧಿಸಂಧಿ ಎನ್ನುವರು.
ಪೂರ್ವಪದದ ಅಂತ್ಯದಲ್ಲಿ ʼಅʼ ಅಥವಾ ʼಆʼ ಸ್ವರಗಳಿದ್ದು, ಅವುಗಳಿಗೆ ʼಏʼ ಅಥವಾ ‘ಐ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಐ’ ಸ್ವರವು, ಅದೇ ರೀತಿ ‘ಓ’ ಅಥವಾ ‘ಔ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಔ’ ಸ್ವರವು ಆದೇಶವಾಗಿ ಬರುತ್ತದೆ. ಇದನ್ನೇ ‘ವೃದ್ಧಿ ಸಂಧಿ’ ಎಂದು ಕರೆಯಲಾಗುತ್ತದೆ.
ಉದಾ:
ಏಕ + ಏಕ = ಏಕೈಕ (ಅ + ಏ = ಐ)
ಶಿವ + ಐಕ್ಯ = ಶಿವೈಕ್ಯ (ಅ + ಐ = ಐ)
ಭಾವ + ಐಕ್ಯ = ಭಾವೈಕ್ಯ (ಅ + ಐ = ಐ)
ವನ + ಔಷಧ = ವನೌಷಧ (ಅ + ಔ = ಔ)
ಸಿದ್ಧ + ಔಷಧ = ಸಿದ್ಧೌಷಧ
ವನ + ಔಷಧಿ = ವನೌಷಧಿ (ಅ + ಔ = ಔ)
ದಿವ್ಯ + ಔಷಧಿ = ದಿವ್ಯೌಷಧಿ (ಅ + ಔ = ಔ)
ಮಹಾ + ಔದಾರ್ಯ = ಮಹೌದಾರ್ಯ (ಆ + ಔ = ಔ)
ಮಹಾ + ಏಕ = ಮಹೈಕ
ಮಹಾ + ಐಕ್ಯ = ಮಹೈಕ್ಯ
ಮಹಾ + ಓಘ = ಮಹೌಘ
ಮಹಾ + ಔಷಧ = ಮಹೌಷಧ
ಲೋಕ + ಏಕ = ಲೋಕೈಕ (ಅ + ಏ = ಐ)
ಜನ + ಐಕ್ಯ = ಜನೈಕ್ಯ (ಅ + ಐ = ಐ)
ಜಲ + ಓಘ = ಜಲೌಘ (ಅ + ಓ = ಔ)
ಅಷ್ಟ + ಐಶ್ವರ್ಯ = ಅಷ್ಟೈಶ್ವರ್ಯ

‘ಅ’ ‘ಆ’ಕಾರಗಳ ಮುಂದೆ ‘ಏ’, ‘ಐ’ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಐ’ಕಾರವೂ ‘ಓ’, ‘ಔ’ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಔ’ಕಾರವೂ ಆದೇಶವಾಗಿ ಬರುವುದು. ಇದಕ್ಕೆ ‘ವೃದ್ಧಿಸಂಧಿ’ ಎಂದು ಹೆಸರು

(4) ಯಣ್ ಸಂಧಿ:

ಪೂರ್ವಪದದ ಅಂತ್ಯದಲ್ಲಿನ ಇ,ಈ,ಉ,ಊ,ಋ ಸ್ವರಗಳಿಗೆ ಅನ್ಯಸ್ವರಗಳು (ಸವರ್ಣವಲ್ಲದ ಸ್ವರ) ಪರವಾದಾಗ ‘ಇ’,’ಈ’ ಸ್ವರಗಳಿಗೆ ‘ಯ್’ ಕಾರವೂ, ‘ಉ’, ‘ಊ’ ಸ್ವರಗಳಿಗೆ ‘ವ್’ ಕಾರವೂ, ‘ಋ’ ಸ್ವರಕ್ಕೆ ‘ರ್’ ಕಾರವು ಆದೇಶವಾಗಿ ಬರುವುದು. ಇದನ್ನು ‘ಯಣ್‌ಸಂಧಿ’ ಎಂದು ಕರೆಯಲಾಗುತ್ತದೆ.

ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ‘ಯಣ್’ ಎಂಬ ಸಂಜ್ಞೆಯೂ ಒಂದು. ಯ್ ರ್ ಲ್ ವ್ ಎಂಬ ನಾಲ್ಕು ವ್ಯಂಜನಗಳನ್ನು ಯಣ್ ಅಕ್ಷರಗಳೆಂದು ಗುರುತಿಸಲಾಗಿದೆ. ಸಂಧಿಯಾಗುವಾಗ ಯಣ್ ಅಕ್ಷರಗಳೆಂದು ಗುರುತಿಸಲಾಗಿದೆ. ಸಂಧಿಯಾಗುವಾಗ ಯಣ್‌ ಅಕ್ಷರಗಳಲ್ಲಿ ಯಾವುದಾದರೂ ಒಂದು ಅಕ್ಷರ ಆದೇಶವಾಗಿ ಬಂದರೆ ಅದೇ ಯಣ್ ಸಂಧಿ.
ಉದಾ:
ಅತಿ + ಉಕ್ತಿ = ಅತ್ಯುಕ್ತಿ (ಇ + ಉ = ಯ)
ಅತಿ + ಆಸೆ = ಅತ್ಯಾಸೆ
ಅತಿ + ಅಂತ = ಅತ್ಯಂತ
ಅತಿ + ಉನ್ನತ = ಅತ್ಯುನ್ನತ
ಅತಿ + ಉತ್ತಮ = ಅತ್ಯುತ್ತಮ
ಅತಿ + ಔದಾರ್ಯ = ಅತ್ಯೌದಾರ್ಯ
ಇತಿ + ಆದಿ = ಇತ್ಯಾದಿ (ಇ + ಆ = ಯ)
ಜಾತಿ + ಅತೀತ = ಜಾತ್ಯತೀತ (ಇ + ಅ = ಯ)
ಪ್ರತಿ + ಉಪಕಾರ = ಪ್ರತ್ಯುಪಕಾರ (ಇ + ಉ = ಯ)
ಮನು + ಅಂತರ = ಮನ್ವಂತರ (ಉ + ಅ = ವ)
ಗುರು + ಆಜ್ಞೆ = ಗರ‍್ವಾಜ್ಞೆ (ಉ + ಆ = ವಾ)
ಪಿತೃ + ಆರ್ಜಿತ = ಪಿತ್ರಾರ್ಜಿತ (ಋ + ಆ = ರ)
ಪಿತೃ + ಆಜ್ಞೆ = ಪಿತ್ರಾಜ್ಞೆ
ಅಣು + ಅಸ್ತ್ರ = ಅಣ್ವಸ್ತ್ರ
ಕೋಟಿ + ಕೋಟಿ = ಕೋಟ್ಯಾನುಕೋಟಿ (ಇ + ಓ = ಯ್)
ಅತಿ + ಅವಸರ = ಅತ್ಯವಸರ = (ಇ + ಅ = ಯ್)
ಜಾತಿ + ಅತೀತ = ಜಾತ್ಯಾತೀತ (ಇ + ಅ = ಯ್‌)
ಪ್ರತಿ + ಉತ್ತರ = ಪ್ರತ್ಯುತ್ತರ (ಇ + ಉ = ಯ್‌)
ಕೋಟಿ + ಆಧೀಶ್ವರ = ಕೋಟ್ಯಾಧೀಶ್ವರ (ಇ + ಆ = ಯ್‌)
ಮನು + ಆದಿ = ಮನ್ವಾದಿ (ಉ + ಆ = ವ್)
ಮನು + ಅಂತರ = ಮನ್ವಂತರ (ಉ + ಅ = ವ್‌)
ಕೋಟಿ + ಅಂತರ = ಕೋಟ್ಯಾಂತರ (ಇ + ಅ = ಯ್‌)

ಇ, ಈ , ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ, ‘ಇ’ ‘ಈ’ ಕಾರಗಳಿಗೆ ‘ಯ’ಕಾರವೂ ಉ, ಊ ಕಾರಗಳಿಗೆ ‘ವ’ ಕಾರವೂ ಋ ಕಾರಕ್ಕೆ ‘ರ’ ಕಾರವೂ ಆದೇಶವಾಗಿ ಬರುವುದನ್ನು `ಯಣ್ ಸಂಧಿ’ ಎಂದು ಕರೆಯುವರು.

ಸಂಸ್ಕೃತ ವ್ಯಂಜನ ಸಂಧಿಗಳು

(5) ಜಶ್ತ್ವಸಂಧಿ:

ಸಂಸ್ಕೃತ ವ್ಯಾಕರಣದಲ್ಲಿ ಪೂರ್ವಪದದ ಕೊನೆಯಲ್ಲಿರುವ ಕ್,ಚ್,ಟ್,ತ್,ಪ್, ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು (ಗ್,ಜ್,ಡ್,ದ್,ಬ್,) ಆದೇಶವಾಗಿ ಬರುತ್ತವೆ. ಇದನ್ನು ‘ಜಶ್ತ್ವಸಂಧಿ’ ಎನ್ನುತಾರೆ. (ಗ್ ಜ್ ಡ್ ದ್ ಬ್ ಅಕ್ಷರಗಳನ್ನು ‘ಜಶ್’ ಎಂಬ ಸಂಜ್ಞೆಯಿಂದ ಕರೆಯಲಾಗಿದೆ.)
ಪೂರ್ವಪದ + ಉತ್ತರ ಪದ = ಸಂಧಿಪದ
ವಾಕ್ + ಈಶ = ವಾಗೀಶ (ಕ್ = ಗ)
ವಾಕ್ + ದಾನ = ವಾಗ್ದಾನ (ಕ್ = ಗ)
ವಾಕ್‌ + ದೇವಿ = ವಾಗ್ದೇವಿ (ಕ್ = ಗ)
ದಿಕ್‌ + ಅಂತ = ದಿಗಂತ (ಕ್‌ = ಗ್)
ಅಚ್‌ + ಅಂತ = ಅಜಂತ (ಚ್‌ = ಜ)
ಸತ್‌ = ಆನಂದ = ಸದಾನಂದ (ತ್‌ = ದ)
ಅಪ್‌ + ಧಿ = ಅಬ್ಧಿ (ಪ್‌ = ಬ್‌)
ದಿಕ್ + ಅಂತ = ದಿಗಂತ (ಕ್ = ಗ)
ಬೃಹತ್ + ಆಕಾಶ = ಬೃಹದಾಕಾಶ (ತ್‌ = ದ)
ಷಟ್ + ಆನನ = ಷಡಾನನ (ಟ್‌ = ಡ)

ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಕ, ಚ, ಟ, ತ, ಪ ಗಳಿಗೆ ಗ, ಜ, ಡ, ದ, ಬ ಗಳು ಆದೇಶವಾಗಿ ಬರುವುದನ್ನು ‘ಜಶ್ತ್ವಸಂಧಿ’ ಎಂದು ಕರೆಯುತ್ತೇವೆ.

(6) ಶ್ಚುತ್ವಸಂಧಿ:

‘ಶ್ಚು’ ಎಂದರೆ ಶಕಾರ ಮತ್ತು ಚವರ್ಗಾಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಶ್ಚುತ್ವ ಸಂಧಿ. ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಸಕಾರ ಅಥವಾ ತವರ್ಗದ ಅಕ್ಷರಗಳಿರುತ್ತವೆ ಉತ್ತರಪದ ಶಕಾರ ಅಥವಾ ಚವರ್ಗದ ಅಕ್ಷರಗಳಿಂದ ಆರಂಭವಾಗುತ್ತದೆ. ‘ಸ’ಕಾರವಿದ್ದ ಕಡೆ ಶಕಾರವೂ ತವರ್ಗದ ಅಕ್ಷರಗಳಿದ್ದ ಕಡೆ ಚವರ್ಗದ ಅಕ್ಷರಗಳೂ ಆದೇಶವಾಗಿ ಬರುವುದನ್ನು ‘ಶ್ಚುತ್ವ ಸಂಧಿ’ ಎಂದು ಕರೆಯುತ್ತೇವೆ.
ಪೂರ್ವಪದ + ಉತ್ತರ ಪದ = ಸಂಧಿಪದ
ಮನಸ್ + ಶುದ್ಧಿ = ಮನಶ್ಶುದ್ಧಿ (ಸ್‌ + ಶ = ಶ)
ಯಶಸ್ + ಚಂದ್ರಿಕೆ = ಯಶಶ್ಚಂದ್ರಿಕೆ (ಸ್‌ + ಚ = ಶ)
ಸತ್ + ಚಿತ್ರ = ಸಚ್ಚಿತ್ರ (ತ್‌ + ಚ = ಚ)
ಪಯಸ್‌ + ಶಯನ = ಪಯಶ್ಶಯನ (ಸ್‌ + ಶ = ಶ)
ಶರತ್‌ + ಚಂದ್ರ = ಶರಚ್ಚಂದ್ರ (ತ್‌ + ಚ = ಚ)
ಜಗತ್‌ + ಜ್ಯೋತಿ = ಜಗಜ್ಜ್ಯೋತಿ (ತ್‌ + ಜ = )
ಬೃಹತ್‌+ಚತ್ರ = ಬೃಹಚ್ಛತ್ರ (ತ್‌ + ಚ = ಛ )

(7) ಷ್ಟುತ್ವ ಸಂಧಿ

ʼಸʼ ಕಾರ, ತ ವರ್ಗ ವ್ಯಂಜನಗಳ ಮುಂದೆ ʼಷʼ ಕಾರ, ʼಟʼ ವರ್ಗ ವ್ಯಂಜನಗಳು ಬಂದರೆ ಕ್ರಮವಾಗಿ ʼಷʼ ಕಾರ, ʼಟʼ ವರ್ಗ ವ್ಯಂಜನಗಳು ವ್ಯಂಜನಗಳು ಆದೇಶವಾದರೆ ಅದನ್ನು ʼಷ್ಟುತ್ವ ಸಂಧಿʼ ಎನ್ನುವರು.
ಉದಾಹರಣೆ:-
ಉತ್ + ಡಯನ = ಉಡ್ಡಯನ
ತತ್ + ಟಿಟ್ಟಿಭ = ತಟ್ಟಟ್ಟಿಭ
ತಪಸ್ + ಷಡ್ಭಾಗ = ತಪಷ್ಷಡ್ಭಾಗ
ಧನುಸ್ + ಟಂಕಾರ = ಧನುಷ್ಟಂಕಾರ

(8) ಛತ್ವ ಸಂಧಿ

ಪೂರ್ವಪದಾಂತ್ಯದಲ್ಲಿ ಅನುನಾಸಿಕವಲ್ಲದ ವರ್ಗೀಯ ವ್ಯಂಜನಕ್ಕೆ ಪರವಾದ ʼಶʼ ಕಾರಕ್ಕೆ ʼಛʼ ಕಾರ ಆದೇಶವಾದರೆ ಅದನ್ನು ʼಛತ್ವ ಸಂಧಿʼ ಎನ್ನುವರು.
ಉದಾಹರಣೆಗೆ:-
ಚಿತ್ + ಶಕ್ತಿ = ಚಿಚ್ + ಶಕ್ತಿ = ಚಿಚ್ಛಕ್ತಿ
ಉತ್ + ಶ್ವಾಸ = ಉಚ್ + ಶ್ವಾಸ = ಉಚ್ಛ್ವಾಸ
ವಿದ್ಯುತ್ + ಶಕ್ತಿ = ವಿದ್ಯುಚ್ + ಶಕ್ತಿ = ವಿದ್ಯುಚ್ಛಕ್ತಿ

(9) ‘ಲ’ ಕಾರ ದ್ವಿತ್ವ ಸಂಧಿ

ʼತʼ ಕಾರದ ಮುಂದೆ ʼಲʼ ಕಾರ ಬಂದರೆ ʼತʼ ಕಾರದ ಸ್ಥಾನದಲ್ಲಿ ʼಲʼ ಕಾರವು ಬಂದರೆ ಅದನ್ನು ʼಲʼ ಕಾರ ದ್ವಿತ್ವ ಸಂಧಿ ಎನ್ನುವರು.
ತತ್ + ಲೀನ = ತಲ್ಲೀನ
ಸತ್ + ಲಕ್ಷಣ = ಸಲ್ಲಕ್ಷಣ

(10) ಅನುನಾಸಿಕಸಂಧಿ:

ಪೂರ್ವಪದ + ಉತ್ತರಪದ = ಸಂಧಿಪದ
೧. ವಾಕ್+ಮಯ=ವಾಙ್ಮಯ
೨. ಷಟ್+ಮುಖ=ಷಣ್ಮುಖ
೩. ಸತ್+ಮಾನ=ಸನ್ಮಾನ
ಉನ್‌ + ಮಾದ = ಉನ್ಮಾದ
ತನ್‌ + ಮಯ = ತನ್ಮಯ
ಙ,ಞ,ಣ,ನ,ಮ ಇವು ಅನುನಾಸಿಕ ಅಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ. ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಕ್, ಚ್, ಟ್, ತ್, ಪ್ ಅಕ್ಷರಗಳಿರುತ್ತವೆ ಉತ್ತರಪದ ಅನುನಾಸಿಕ ಅಕ್ಷರಗಳಿಂದ ಆರಂಭವಾಗುತ್ತದೆ. ವರ್ಗದ ಕ,ಚ,ಟ,ತ,ಪ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳೂ ಆದೇಶವಾಗಿ ಬರುವುದನ್ನು ‘ಅನುನಾಸಿಕ ಸಂಧಿ’ ಎಂದು ಕರೆಯುತ್ತೇವೆ.
ಪೂರ್ವಪದ + ಉತ್ತರಪದ = ಸಂಧಿಪದ
ದಿಕ್ + ನಾಗ = ದಿಙ್ನಾಗ (ಕ್‌ + ನ = ಙ)
ಷಟ್ + ಮಾಸ = ಷಣ್ಮಾಸ (ಟ್‌ + ಮ = ಣ)
ಚಿತ್ + ಮೂಲ = ಚಿನ್ಮೂಲ (ತ್‌ + ಮ = ನ)